Uncategorized

ಹಳೇಪಠ್ಯವಿರಲಿ, ಹೊಸಪಠ್ಯ ಕೈಬಿಡಿ

ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯನ್ನು ರದ್ದುಗೊಳಿಸಿ ಹಳೆಯ ಪಠ್ಯಕ್ರಮವನ್ನೆ ಮುಂದುವರೆಸುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಇಂದು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿರುವ ಧರಣಿ ಸತ್ಯಾಗ್ರಹದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು, ಸಂಸದರು, ಹಿರಿಯ ಮುಖಂಡರುಗಳು ಹಾಗೂ ಮುಂಚೂಣಿ ಘಟಕಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದು, ರಾಜ್ಯ ಸರ್ಕಾರ ಕೂಡಲೇ ಪರಿಷ್ಕರಣೆಯಾಗಿರುವ ಪಠ್ಯವನ್ನು ವಾಪಸ್ ಪಡೆದು ಹಿಂದಿನ ಪಠ್ಯ ಕ್ರಮವನ್ನೆ ಮುಂದುವರೆಸುವಂತೆ ಒತ್ತಾಯಿಸಿದ್ದಾರೆ.

ನಾಡಿನ ದಾರ್ಶನಿಕರು, ಮಹಾನ್ ಚೇತನಗಳಿಗೆ ಅಪಮಾನ ಮಾಡಿ ಇತಿಹಾಸವನ್ನು ತಿರುಚಿರುವ ಪರಿಷ್ಕೃತ ಪಠ್ಯಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರುಗಳು ಘೋಷಣೆ, ಬಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.ಪರಿಷ್ಕೃತ ಪಠ್ಯವನ್ನು ವಾಪಸ್ ಪಡೆಯುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂಬ ಘೋಷಣೆಗಳನ್ನು ಕೂಗಿದ ಕಾಂಗ್ರೆಸ್ ನಾಯಕರು ಕುವೆಂಪು ಬೇಕು, ಆರ್‌ಎಸ್‌ಎಸ್ ಬೇಡ, ಬಸವಣ್ಣ ಬೇಕು ಸೂಲಿಬೆಲೆ ಬೇಡ, ಆರ್‌ಎಸ್‌ಎಸ್ ಕೈಗೊಂಬೆ ಬಿಜೆಪಿ ಸರ್ಕಾರ, ನಾಡಗೀತೆಗೆ ಅವಮಾನ ಮಾಡಿದ ಬಿಜೆಪಿ ಬೇಡ ಎಂಬ ಘೋಷಣೆಗಳನ್ನು ಏರು ಧ್ವನಿಯಲ್ಲಿ ಕೂಗಿದರು.

ಅಂದು ಭಗತ್‌ಸಿಂಗ್ ರಾಣಿ ಅಬ್ಬಕ್ಕನವರ ಪಾಠವಿತ್ತು. ಇಂದು ಹೆಗ್ಡೆವಾರ್, ಸಾವರ್ಕರ್, ಸೂಲಿಬೆಲೆಯ ಪಾಠವಿದೆ ಎಂಬ ಬಿತ್ತಿ ಪತ್ರಗಳನ್ನು ಕಾಂಗ್ರೆಸ್ ನಾಯಕರು ಹಿಡಿದಿದ್ದು, ಸರ್ಕಾರದ ವಿರುದ್ಧ ಏರುಧ್ವನಿಯಲ್ಲಿ ಧಿಕ್ಕಾರದ ಘೋಷಣೆಗಳು ಕೂಗಿದರು.ಸಿ.ಎಂ. ರಾಜೀನಾಮೆಗೆ ಡಿಕೆಶಿ ಆಗ್ರಹ ಕಾಂಗ್ರೆಸ್‌ನ ಧರಣಿ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯದಲ್ಲಿ ಅಶಾಂತಿ ವಾತಾವರಣ ಮೂಡುತ್ತಿದೆ.

ಹಾಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ರಾಜ್ಯ ಸರ್ಕಾರ ನಾರಾಯಣ ಗುರು, ಸಂವಿಧಾನ ಶಿಲ್ಪಿ ಅಂಬೇಡ್ಕರ್, ಕುವೆಂಪು, ಬುದ್ಧ, ಜೈನ ತೀರ್ಥಂಕರರಿಗೆ ಅಪಮಾನ, ಅಪಚಾನ ಮಾಡಿದೆ ಎಂದು ಹರಿಹಾಯ್ದರು.ಯಾರೋ ಕೆಲಸಕ್ಕೆ ಬಾರದವನಿಂದ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಿದ್ದಾರೆ. ನಾಗಪುರ ಶಿಕ್ಷಣವನ್ನು ಕೊಡುವುದಕ್ಕೆ ಹೊರಟಿದ್ದಾರೆ.

ನಮ್ಮ ಸ್ವಾಭಿಮಾನ ಉಳಿಸಲೇಬೇಕು. ಹಾಗಾಗಿ ನಾವು ಈ ಹೋರಾಟ ಮಾಡುತ್ತಿದ್ದೇವೆ. ಸಾಮಾನ್ಯರ ಧ್ವನಿಗೆ ನಾವು ಧ್ವನಿ ಸೇರಿಸಿದ್ದೇವೆ.

ಹೊಸ ಪಠ್ಯವನ್ನು ಕಸದ ಬುಟ್ಟಿಗೆ ಹಾಕಬೇಕು. ಹಳೇ ಪಠ್ಯವನ್ನು ಮುಂದುವರೆಸಬೇಕು ಎಂದು ಅವರು ಒತ್ತಾಯಿಸಿದರು.

ಸಿದ್ದರಾಮಯ್ಯ ಹೇಳಿಕೆ ಇದೇ ಸಂದರ್ಭದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪಠ್ಯ ಪರಿಷ್ಕರಣೆ ಕ್ರಮ ವಿರೋಧಿಸಿ ಇಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ.

ಮುಂದೆ ಹೋರಾಟ ತೀವ್ರಗೊಳಿಸುತ್ತೇವೆ ಎಂದರು.ರೋಹಿತ್ ಚಕ್ರತೀರ್ಥ ಸಮಿತಿಯನ್ನು ವಿಸರ್ಜಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಸರ್ಜನೆ ಮಾಡಿದ ಸಮಿತಿಯ ಪಠ್ಯವನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ. ಹಾಗಾಗಿ ಈಗಿನ ಪರಿಷ್ಕೃತ ಪಠ್ಯವನ್ನು ವಾಪಸ್ ಪಡೆದು ಹಳೇ ಪಠ್ಯವನ್ನೆ ಮುಂದುವರೆಸುವಂತೆ ಆಗ್ರಹಿಸಿದರು.

ಪಠ್ಯ ಪರಿಷ್ಕರಣೆಗೆ ಸ್ವಾಮೀಜಿಗಳು ಸೇರಿ ನಾಡಿನ ಎಲ್ಲ ಜನ ವಿರೋಧಿಸಿದ್ದಾರೆ. ಪಠ್ಯದಲ್ಲಿ ಲೋಪವಾಗಿದ್ದರೆ ಸರಿಪಡಿಸುತ್ತೇವೆ ಎಂದಿದ್ದಾರೆ. ಅಲ್ಲಿಗೆ ಪಠ್ಯ ತಿರುಚಿರುವುದು ಸತ್ಯವಾಗಿದೆ. ಅದನ್ನು ಸರ್ಕಾರವೇ ಒಪ್ಪಿಕೊಂಡಂತಾಗಿದೆ ಎಂದರು.

ಯಾವುದೇ ಕಾರಣಕ್ಕೂ ಹೊಸ ಪಠ್ಯ ಬೇಡ. ಅವುಗಳನ್ನೆಲ್ಲ ವಾಪಸ್ ಪಡೆದು ಬರಗೂರರ ಸಮಿತಿ ಪಠ್ಯವನ್ನೆ ಮುಂದುವರೆಸಬೇಕು.

ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ಸಿದ್ದರಾಮಯ್ಯ ಎಚ್ಚರಿಸಿದರು.

ಹೊಸ ಪಠ್ಯದಲ್ಲಿ ಎಲ್ಲವನ್ನು ತಿರುಚಿ ಕೇಸರೀಕರಣ ಮಾಡಿದ್ದಾರೆ. ಇತಿಹಾಸ ತಿರುಚುವ ಕೆಲಸ ನಡೆದಿದೆ.

ಇದನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button