
ಪದೇ ಪದೇ ಹಣ ಕೊಡುವಂತೆ ಪೀಡಿಸುತ್ತಿದ್ದ ಮಗನಿಗೆ ಕಬ್ಬಿಣದ ರಾಡಿನಿಂದ ಹೊಡೆದು ತಂದೆಯೇ ಕೊಲೆ ಮಾಡಿರುವ ಘಟನೆ ಆರ್ಟಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ಗ್ಯಾರೇಜ್ನಲ್ಲಿ ಮೆಕಾನಿಕ್ ಕೆಲಸ ಮಾಡುತ್ತಿದ್ದ ಮೊಹಮದ್ ಸುಲೇಮಾನ್(18) ಕೊಲೆಯಾದವನು.
ಚಾಮುಂಡಿನಗರದ ನಿವಾಸಿ ಮೊಹಮ್ಮದ್ ಸಂಶೀರ್(42) ಬಾರ್ ಬೆಂಡರ್ ವೃತ್ತಿ ಮಾಡುತ್ತಿದ್ದು, ಇವರ ಮಗ ಮೊಹಮ್ಮದ್ ಸುಲೇಮಾನ್ ಪದೇ ಪದೇ ಅವರ ಬಳಿ ಹಣ ಕೇಳುತ್ತಿದ್ದರಿಂದ ತಂದೆ-ಮಗನ ಮಧ್ಯೆ ನಿನ್ನೆ ಜಗಳವಾಗಿದೆ. ಇಂದು ಮುಂಜಾನೆ 5.30ರ ಸುಮಾರಿನಲ್ಲಿ ಮತ್ತೆ ತಂದೆ-ಮಗನ ನಡುವೆ ಹಣಕಾಸು ವಿಚಾರವಾಗಿ ಮಾತಿಗೆ ಮಾತು ಬೆಳೆದಿದೆ.
ಆ ಸಂದರ್ಭದಲ್ಲಿ ತಂದೆ ಕೈಗೆ ಸಿಕ್ಕಿದ ಕಬ್ಬಿಣದ ರಾಡಿನಿಂದ ಮಗನಿಗೆ ಹೊಡೆದಿದ್ದರಿಂದ ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾನೆ. ಘಟನೆ ನಡೆದ ಸಂದರ್ಭದಲ್ಲಿ ಮೊಹಮ್ಮದ್ ಸುಲೇಮಾನ್ ಅವರ ತಾಯಿ ಮನೆಯಲ್ಲಿರಿಲಿಲ್ಲ. ಕೃಷ್ಣಗಿರಿಗೆ ಹೋಗಿದ್ದರು.
ಘಟನೆ ಸಂಬಂಧ ಮೊಹಮ್ಮದ್ ಸುಲೇಮಾನ್ ಅವರ ತಾತ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.