ಹಗೇವಿನಲ್ಲಿ ಉಕ್ಕಿರುವ ಅಂತರ್ಜಲದಿಂದ ಹಾಳಾದ ಜೋಳದ ರಾಶಿ! ಕಣ್ಣೀರು ಹಾಕುತ್ತಿರುವ ರೈತರು!

ಗದಗ: ಕಳೆದ ವರ್ಷ ಬೆಳೆದ ಜೋಳವನ್ನು ಹಗೇವುಗಳಲ್ಲಿ ಸಂಗ್ರಹ ಮಾಡಿದ್ದ ರೈತರಿಗೆ ದೊಡ್ಡ ಶಾಕ್ ಕಾದಿತ್ತು. ಬಿತ್ತನೆಗೆಂದು ಹಗೇವು ತೆಗೆದಾಗ ರೈತರ ಎದೆ ಝಲ್ ಎಂದಿತ್ತು. ಯಾಕೆಂದರೆ ಹಗೇವಿನಲ್ಲಿ ಅಂತರ್ಜಲ ಉಕ್ಕಿದ ಕಾರಣ ಜೋಳದ ಕಾಳುಗಳು ನೀರಿಲ್ಲಿ ಹೋಮ ಆಗಿಬಿಟ್ಟಿದವು.
ಹಗಲು ರಾತ್ರಿ ಕಷ್ಟಪಟ್ಟು ಬೆಳೆದು ರಾಶಿ ಮಾಡಿ ಸಂಗ್ರಹ ಮಾಡಿದ ಜೋಳದಿ ಕಾಳು ಹಾನಿಯಾಗಿ ಅನ್ನದಾತರು ಕಂಗಾಲಾಗಿದ್ದಾರೆ. ಅಳಿದು ಉಳಿದ ಜೋಳ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು, ಗದಗ ತಾಲೂಕಿನ ಹರ್ಲಾಪೂರ ಗ್ರಾಮದಲ್ಲಿ.
ಅಲ್ಲಿ ಸುಮಾರು 20-30 ಹಗೇವುಗಳು ಇವೆ. ಅಲ್ಲಿ ಹಿಂದಿನ ಕಾಲದಿಂದ ರೈತರು ಹಗೇವುಗಳಲ್ಲಿ ದವಸ ಧಾನ್ಯಗಳನ್ನು ಸಂಗ್ರಹ ಮಾಡಿಕೊಂಡು ಬರುತ್ತಿದ್ದಾರೆ. ಅದೇ ರೀತಿ ಕಳೆದ ವರ್ಷ ರೈತರು ಜೋಳವನ್ನು ಬೆಳೆದಿದ್ದರು. ಜೋಳದ ರಾಶಿ ಮಾಡಿ ತಮ್ಮ ತಮ್ಮ ಹಗೇವುಗಳಲ್ಲಿ ಸಂಗ್ರಹ ಮಾಡಿ ಇಡುತ್ತಿದ್ದರು.ಆದರೆ, ಈ ವರ್ಷ ರೈತರ ಹಣೆ ಬರಹವೇ ಸರಿಯಿಲ್ಲ.
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಹೆಸರು ಕಾಳು, ಗೋವಿನಜೋಳ ಹತ್ತಿ ಮೆಣಸಿನಕಾಯಿ, ಈರುಳ್ಳಿ ಹಾಳಾಗಿ ಕಂಗಾಲಾದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಹಗೇವುಗಳಲ್ಲಿ ಸಂಗ್ರಹ ಮಾಡಿದ ಜೋಳಕ್ಕೆ ಅಂತರ್ಜಲ ನೀರಿನ ಕಾಟ ಹೆಚ್ಚಾಗಿದೆ.
ಅಂತರ್ಜಲ ನೀರು ಹಗೇವುಗಳಲ್ಲಿ ಉಕ್ಕುತ್ತಿರುವ ಕಾರಣ ಜೋಳದ ರಾಶಿ ಸಂಪೂರ್ಣ ಹಾಳಾಗಿದೆ.ಜೋಳದ ರಾಶಿ ಹಾಳಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹರ್ಲಾಪೂರ ಗ್ರಾಮದ ಪ್ರತಿಯೊಂದು ಹಗೆಯಲ್ಲಿ 20ಕ್ಕೂ ಹೆಚ್ಚು ಚೀಲದಷ್ಟು ಜೋಳದ ಸಂಗ್ರಹ ಮಾಡಿದ್ದರು. ಅತೀ ಹೆಚ್ವು ಮಳೆಯಾಗುತ್ತಿರುವ ಕಾರಣ ಅಂತರ್ಜಲ ಹೆಚ್ಚಳವಾಗಿದೆ.
ಇದ್ದಿದ್ದರಿಂದ ರೈತರ ಜೋಳ ಸಂಪೂರ್ಣ ಹಾನಿಯಾಗಿದ್ದನ್ನು ಕಂಡು ರೈತ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಮನೆಯಲ್ಲಿ ಸಂಗ್ರಹ ಮಾಡಬೇಕೆಂದರೆ ಮನೆಯೂ ಸಣ್ಣದು ಇದೆ. ಮನೆಯಲ್ಲಿ ಇಟ್ಟರೆ ಹುಳುಗಳ ಹತ್ತಿ ಜೋಳ ಹಾಳಾಗುತ್ತದೆ ಎಂಬ ದೃಷ್ಟಿಯಿಂದ ಹಗೇವಿನಲ್ಲಿ ರೈತರು ಜೋಳ ಸಂಗ್ರಹ ಮಾಡಿದ್ದರು.
ಆದರೆ, ಅಂತರ್ಜಲದಿಂದ ಜೋಳ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. ಹಾನಿಯಾದ ಜೋಳಕ್ಕೆ ಸರ್ಕಾರ ಪರಿಹಾರ ನೀಡಬೇಕೆಂಬುದು ಅನ್ನದಾತರ ಅಳಲಾಗಿದೆ.ಆದರೆ, ಅಂತರ್ಜಲದಿಂದ ರೈತರ ಹೊಟ್ಟೆ ಸೇರಬೇಕಿದ್ದ ಜೋಳ ಈವಾಗ ತಿಪ್ಪೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾನಿಯಾಗಿರುವ ರೈತರ ಜೋಳಕ್ಕೆ ಸರ್ಕಾರ ಪರಿಹಾರ ನೀಡುವ ಕೆಲಸ ಮಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.