ಹಕ್ಕಿಜ್ವರ ಭೀತಿ : ಕೇರಳದಲ್ಲಿ 6 ಸಾವಿರಕ್ಕೂ ಹೆಚ್ಚು ಪಕ್ಷಿಗಳ ಮಾರಣಹೋಮ

ಕೇರಳದಲ್ಲಿ ಹಕ್ಕಿಜ್ವರ ಭೀತಿ ಎದುರಾಗಿದೆ. ಕೊಟ್ಟಾಯಂನಲ್ಲಿ ಹಕ್ಕಿಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ 6 ಸಾವಿರಕ್ಕೂ ಹೆಚ್ಚು ಹಕ್ಕಿಗಳನ್ನು ಹತ್ಯೆ ಮಾಡಲಾಗಿದೆ. ಮುಂದಿನ ಮೂರು ದಿನಗಳ ಕಾಲ ಮಾಂಸ ಮತ್ತು ಮೊಟ್ಟೆ ಮಾರಾಟ ಕೂಡ ನಿಷೇಧ ಮಾಡಲಾಗಿದೆ.
ಕೊಟ್ಟಾಯಂನ ವೇಚೂರು, ನಿಂದೂರು, ಅರ್ಪುಕರ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಕ್ಕಿಗಳನ್ನು ಕೊಲ್ಲಲಾಗಿದೆ.ವೇಚೂರು ಗ್ರಾಪಂನಲ್ಲಿ 133 ಬಾತುಕೋಳಿಗಳು ಮತ್ತು 156 ಕೋಳಿಗಳು, ನಿಂದೂರು ಪಂಚಾಯ್ತಿಯಲ್ಲಿ 2750 ಕೋಳಿ, ಅರ್ಪುಕರದಲ್ಲಿ 3000 ಕೋಳಿ ಸೇರಿ 6017 ಕೋಳಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಕ್ಕಿಗಳು ಸಾಮೂಹಿಕವಾಗಿ ಸಾವನ್ನಪ್ಪಿದ ನಂತರ ಭೂಪಾಲ್ ನ್ಯಾಷನಲ್ ಇನ್ಸ್‍ಟಿಟ್ಯೂಟ್‍ನ ಅನಿಮಲ್ ಡಿಸೀಸ್ ಲ್ಯಾಬ್‍ನಲ್ಲಿ ಪರೀಕ್ಷೆ ನಡೆಸಿದಾಗ ಹೆಚ್-5ಎನ್-1 ಸೋಂಕು ಇರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ವೇಚೂರು, ನಿಂದೂರು ಮತ್ತು ಅರ್ಪುಕರ ಪಂಚಾಯ್ತಿಗಳ 1ಕಿಮೀ ವ್ಯಾಪ್ತಿಯಲ್ಲಿರುವ ಪಕ್ಷಿಗಳನ್ನು ದಯಾಮರಣ ಮಾಡಿ ಹೂಳಲಾಗಿದೆ ಎಂದು ತಿಳಿಸಿದ್ದಾರೆ.ವೈರಸ್ ಸೋಂಕು ದೃಢಪಟ್ಟ ಜಿಲ್ಲೆಯ 15 ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಡಿ.23 ರಿಂದ ಮೂರು ದಿನಗಳ ಕಾಲ ಮೊಟ್ಟೆ ಮತ್ತು ಮಾಂಸ ಮಾರಾಟ ನಿಷೇಧ ಮಾಡಲಾಗಿದೆ.
3 ರಿಂದ 5 ದಿನಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸಾಮೂಹಿಕವಾಗಿ ಪಕ್ಷಿಗಳ ಸಾವು ಸಂಭವಿಸುತ್ತದೆ. ಈ ವೈರಸ್ ಸಾಮಾನ್ಯವಾಗಿ ಮನುಷ್ಯನಿಗೆ ಹರಡುವುದಿಲ್ಲ.
ಆದರೂ ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಲಕ್ಷದ್ವೀಪ ಕೋಳಿ ಆಮದನ್ನು ನಿಲ್ಲಿಸಿದೆ.