ರಾಜ್ಯ

ಸ್ವತ್ತು ಮಾರಾಟ ವೆಬ್‌ಸೈಟ್‌ನಲ್ಲಿ ಪ್ರಕಟ

ಸ್ಥಿರಾಸ್ತಿಗಳ ನೋಂದಣಿಯ ವೇಳೆ ಸ್ವತ್ತು ಖರೀದಿ ಅಥವಾ ಮಾರಾಟ ಸಂಬಂಧ ದಾಖಲೆ ವ್ಯವಸ್ಥೆ ಬದಲಾಯಿಸಿ ಸರ್ಕಾರಿ ವೆಬ್‌ಸೈಟ್‌ನಲ್ಲಿಯೇ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್ತಿನಲ್ಲಿಂದು ಪ್ರಶ್ನೋತ್ತರ ಕಲಾಪ ವೇಳೆ ಕಾಂಗ್ರೆಸ್ ಸದಸ್ಯ ಗೋವಿಂದರಾಜು ಪರವಾಗಿ ಕೆ.ಎ.ತಿಪ್ಪೇಸ್ವಾಮಿ ಕೇಳಿದ ಪ್ರಶ್ನೆ ಉತ್ತರಿಸಿದ ಅವರು, ಕಂದಾಯ ಇಲಾಖೆಯಲ್ಲಿ ಭ್ರಷ್ಟಚಾರಕ್ಕೆ ಕಡಿವಾಣ ಹಾಕಲು ನಿಯಮಾವಳಿಗಳನ್ನು ಸರಳೀಕರಣ ಮಾಡಲಾಗುತ್ತಿದೆ.

ಶೀಘ್ರವಾಗಿ ಸೇವೆ ಒದಗಿಸಲು ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.ಉಪನೋಂದಣಾಕಾರಿಗಳ ಕಚೇರಿಯಲ್ಲಿ ನಕಲಿ ದಾಖಲೆಗಳನ್ನು ಒದಗಿಸಿದ್ದರಿಂದ ಅವ್ಯವಹಾರಗಳಾಗಿವೆ. ಹಲವು ವರ್ಷಗಳಿಂದಲೂ ಇದನ್ನು ತಪ್ಪಿಸಲು ಪ್ರತಿಯೊಬ್ಬರು ಯತ್ನಿಸಿದ್ದಾರೆ. ಆದರೆ ಸಂಪೂರ್ಣ ಸಾಧ್ಯವಾಗಿಲ್ಲ.

ಅದಕ್ಕಾಗಿ ವ್ಯವಸ್ಥೆಯನ್ನೇ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಕಂದಾಯ ಇಲಾಖೆಯಿಂದ ವೆಬ್‌ಸೈಟ್‌ನಲ್ಲಿ ದೊರೆಯುವಂತೆ ಮಾಡಲಾಗುವುದು ಎಂದರು.ಯಾವ ಆಸ್ತಿ ಯಾರ ಹೆಸರಿನಲ್ಲಿದೆ. ಎಲ್ಲಿ ಕೆರೆ, ಕಾಲುವೆಗಳಿವೆ, ಅದರ ಹಿನ್ನೆಲೆ ಏನು ಎಂಬೆಲ್ಲಾ ಮಾಹಿತಿಗಳು ಕಂದಾಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗುವುದು.

ಅದನ್ನು ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ. ಪ್ರಮುಖ ಕಿಯನ್ನು ಕಂದಾಯ ಇಲಾಖೆ ಕಾರ್ಯದರ್ಶಿ ಅವರಿಗೆ ನೀಡಲಾಗುವುದು. ಯಾವುದೇ ಮಾರ್ಪಾಡು ಮಾಡಬೇಕಾದರೂ ಕಾರ್ಯದರ್ಶಿ ಹಂತದಲ್ಲೇ ನಡೆಯಬೇಕಾಗುತ್ತದೆ ಎಂದರು.

ಇದೇ ವೇಳೆ ಸದಸ್ಯ ಅನಿಲ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್.ಅಶೋಕ್, ಸರ್ಕಾರಿ ಜಮೀನನ್ನು ಉಳುಮೆ ಮಾಡುತ್ತಿರುವ ರೈತರಿಗೆ ಪಿ ನಂಬರ್ ನೀಡಲಾಗುತ್ತಿದೆ. ಸರ್ಕಾರಿ ಭೂಮಿ ಉಳುಮೆ ಮಾಡುವವರಿಗೆ ಕಳೆದ ೫೦ ವರ್ಷದಿಂದಲೂ ದಾಖಲೆಗಳ ಕೊರತೆ ಇದೆ.

ಈ ರೈತರಿಗೆ ಸರ್ಕಾರಿ ಸೌಲಭ್ಯ ಸಿಗಲಿ ಎಂಬ ಕಾರಣಕ್ಕೆ ಇತ್ತೀಚೆಗೆ ಪಿ ನಂಬರ ನೀಡುವ ಪದ್ಧತಿ ಜಾರಿಯಾಗಿದೆ. ಇದನ್ನು ತೆಗೆದು ಖಾಯಂ ಸರ್ವೇ ನಂಬರ್ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಕೋಲಾರಕ್ಕೆ ನಿಯಮ ೬ರಿಂದ ೧೦ಕ್ಕೆ ವಿನಾಯಿತಿ ನೀಡಲಾಗಿದ್ದು, ಪಿ ನಂಬರ್ ಸಮಸ್ಯೆ ಇತ್ಯರ್ಥ್ಯವಾಗಿದೆ ಎಂದರು.ಕೋಲಾರ ಜಿಲ್ಲೆಯಲ್ಲಿ ೨ ಸಾವಿರ ಎಕರೆಗೆ ವಿಶೇಷ ಅನುಮತಿ ನೀಡಲಾಗಿದೆ.

೪೫೦ ಎಕರೆ ಮಾತ್ರ ಬಾಕಿ ಇದೆ. ಕೆಲವೆಡೆ ಹಕ್ಕುದಾರರು ಮತ್ತು ಉಳುಮೆದಾರರಿಗೆ ತಾಳೆಯಾಗುತ್ತಿಲ್ಲ. ಅರಣ್ಯ ಇಲಾಖೆಯ ಎನ್‌ಒಸಿ ಸಿಗುತ್ತಿಲ್ಲ. ಅನುಭೋಗದಲ್ಲಿ ಇರುವುದು ಮತ್ತು ವಾಸ್ತವದಲ್ಲಿ ಇರುವ ಭೂಮಿ ವಿಸ್ತೀರ್ಣದ ನಡುವೆ ವ್ಯತ್ಯಾಸವಿದೆ.

೧೦೦ ಎಕರೆ ಮಂಜೂರಾಗಿರುವ ಕಡೆ ೯೦ ಎಕರೆ ಹಂಚಿಕೆಯಾಗಿದ್ದರೆ ಸಮಸ್ಯೆ ಇರುವುದಿಲ್ಲ. ಆದರೆ ೧೨೦ ಎಕರೆಗೆ ಹಂಚಿಕೆಯಾಗಿದ್ದರೆ ತೊಂದರೆಗಳು ಎದುರಾಗುತ್ತವೆ ಎಂದರು.

ಕಡಿಮೆ ವಿಸ್ತೀರ್ಣಕ್ಕೆ ಹಕ್ಕು ಪತ್ರ ನೀಡಿದ್ದರೆ ಎದುರಾಗುವ ಸಮಸ್ಯೆಗಳ ನಿವಾರಣೆಗೆ ಕೋಲಾರದಲ್ಲಿ ನೀಡಲಾಗಿರುವ ವಿಶೇಷ ಅನುಮತಿಯನ್ನು ರಾಜ್ಯಾದ್ಯಂತ ನೀಡಲು ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಭರವಸೆ ನೀಡಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button