ರಾಜ್ಯ

ಸ್ಮಾರ್ಟ್‌ ಸಿಟಿ ಯೋಜನೆಯಡಿ ಕಬ್ಬನ್‌ ಪಾರ್ಕ್‌ಗೆ ಹೊಸ ಲುಕ್‌

ಮುಂದಿನ ತಿಂಗಳಾಂತ್ಯದೊಳಗೆ ಕಬ್ಬನ್‌ ಪಾರ್ಕ್‌ ಹೊಸ ಲುಕ್‌ನೊಂದಿಗೆ ಕಂಗೊಳಿಸಲಿದೆ. ಆಕರ್ಷಕ ಫುಟ್‌ಪಾತ್‌ಗಳು, ವಿನೂತನ ಜಾಗಿಂಗ್‌ ಟ್ರ್ಯಾಕ್‌, ಅಂದದ ಬೆಂಚ್‌, ಡಸ್ಟ್‌ ಬಿನ್‌ಗಳು ಸಂದರ್ಶಕರನ್ನು ಸ್ವಾಗತಿಸಲಿವೆ. ತುಕ್ಕು ಹಿಡಿದಿದ್ದ ಕಾರಂಜಿಗಳಿಗೆ ಹೊಸ ರೂಪ ಸಿಗಲಿದೆ.

ಕಮಲದ ಕೆರೆ ಕೂಡ ಪುನಶ್ಚೇತನಗೊಳ್ಳಲಿದೆ.ಸೈಕಲ್‌ ಪ್ರಿಯರಿಗಾಗಿ ಸೈಕಲ್‌ ಟ್ರ್ಯಾಕ್‌ ನಿರ್ಮಾಣವಾಗಿದೆ. ಉದ್ಯಾನದಲ್ಲೇ ಇರುವ ಬಾಲ ಭವನದಲ್ಲೂ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಅದಕ್ಕೂ ಹೊಸ ರೂಪ ನೀಡಲಾಗಿದೆ.

24 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಈ ಎಲ್ಲ ಕಾಮಗಾರಿ ಕೈಗೊಳ್ಳಲಾಗಿದೆ.ಎರಡು ಹಂತದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಕೋವಿಡ್‌ ಹಿನ್ನೆಲೆಯಲ್ಲಿ ಕಾಮಗಾರಿಗಳು ತಡವಾಗಿವೆ. ಇಲ್ಲದಿದ್ದರೆ ಕಳೆದ ವರ್ಷವೇ ಪೂರ್ಣಗೊಳ್ಳಬೇಕಿತ್ತು.

ಇದೀಗ ಬಹುತೇಕ ಪೂರ್ಣಗೊಂಡಿದ್ದು, ಸೆಪ್ಟೆಂಬರ್‌ಗೆ ಪೂರ್ಣಗೊಳಿಸಿ ಕೊಡುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ’ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್‌. ಟಿ. ಬಾಲ ಕೃಷ್ಣ ಮಾಹಿತಿ ನೀಡಿದ್ದಾರೆ.ಏನೇನು ಕಾಮಗಾರಿ ?ಮೊದಲ ಹಂತದಲ್ಲಿ 17 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು.

ಇದರಲ್ಲಿ ವಾಯು ವಿಹಾರಿಗಳಿಗಾಗಿ 8 ಕಿ. ಮೀ. ಉದ್ದದ ಪಾದಚಾರಿ ಮಾರ್ಗ, 2.35 ಕಿ. ಮೀ. ಉದ್ದದ ಜಾಗಿಂಗ್‌ ಪಥಗಳ ಅಭಿವೃದ್ಧಿ ಕೆಲಸ ನಡೆಯಿತು. ಜತೆಗೆ, ತ್ಯಾಜ್ಯ ಮತ್ತು ಪಾಚಿ ತುಂಬಿಕೊಂಡಿದ್ದ ತಾವರೆ ಕೊಳದ (ಲೋಟಸ್‌ ಪಾಂಡ್‌) ನವೀಕರಣವೂ ನಡೆಯಿತು.ಎರಡನೇ ಹಂತದಲ್ಲಿ 4 ನೀರಿನ ಕಾರಂಜಿಗಳನ್ನು ದುರಸ್ತಿ ಮಾಡಲಾಯಿತು. 350 ಅಲಂಕಾರಿಕ ಡಸ್ಟ್‌ ಬಿನ್‌ಗಳನ್ನು ಅಳವಡಿಸಲಾಯಿತು.

ಉದ್ಯಾನದಲ್ಲಿ ಕುಳಿತುಕೊಳ್ಳಲು ಹೆಚ್ಚುವರಿ ಬೆಂಚುಗಳನ್ನು ವ್ಯವಸ್ಥೆ ಮಾಡಲಾಗಿದೆ. ಹಾಳಾಗಿದ್ದ ಹಳೆ ಬೆಂಚುಗಳನ್ನು ದುರಸ್ತಿ ಮಾಡಲಾಗಿದೆ. 18 ಎಕರೆಯಲ್ಲಿ ಲ್ಯಾಂಡ್‌ ಸ್ಕೇಪಿಂಗ್‌, ನೀರಾವರಿ ಮತ್ತು ಪೈಪ್‌ಲೈನ್‌ ಅಳವಡಿಕೆ, ಕರಗದ ಕುಂಟೆ ಪುನಶ್ಚೇತನ, ಆಂತರಿಕ ಪಾತ್‌ ವೇಗಳ ಅಭಿವೃದ್ಧಿ ನಡೆದಿದೆ.

ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಉದ್ಯಾನದಲ್ಲಿ ಹಲವು ಕಾಮಗಾರಿಗಳನ್ನು ನಡೆಸಲಾಯಿತು.

ಜನ ಸ್ನೇಹಿ ಕಾಮಗಾರಿಗಳನ್ನು ನಡೆಸುವ ಉದ್ದೇಶದಿಂದ ಕಾಲ ಕಾಲಕ್ಕೆ ಸಾರ್ವಜನಿಕರಿಂದಲೇ ಸಲಹೆ, ಸೂಚನೆಗಳನ್ನು ಪಡೆದು ಕೆಲಸ ಮಾಡಲಾಯಿತು’ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಎಚ್‌. ಟಿ. ಬಾಲ ಕೃಷ್ಣ ಮಾಹಿತಿ ನೀಡಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button