
ಸ್ಪೈ ಕಾಮೆರಾ ಬಳಸಿ ಮಹಿಳೆಯ ನಗ್ನ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮೈಸೂರು ಜಿಲ್ಲೆ ಟಿ.ನರಸೀಪುರದ ಮಹೇಶ್(30) ಬಂಧಿತ ಆರೋಪಿ.
ಪಿರ್ಯಾದುದಾರರ ಇನ್‍ಸ್ಟಾಗ್ರಾಮ್ ಖಾತೆಗೆ ಅಪರಿಚಿತ ವ್ಯಕ್ತಿಯ ನಕಲಿ ಇನ್‍ಸ್ಟಾಗ್ರಾಮ್ ಖಾತೆಯಿಂದ ಮೆಸೆಜ್‍ಗಳು ಬಂದಿದ್ದು, ಆ ಮೆಸೇಜ್ ಮಾಡುತ್ತಿದ್ದ ವ್ಯಕ್ತಿಯ ಪರಿಚಯವಿಲ್ಲದ ಕಾರಣ ಬ್ಲಾಕ್ ಮಾಡಿದ್ದರು.
ಪುನಃ ಬೇರೆ ಬೇರೆ ಇನ್‍ಸ್ಟಾಗ್ರಾಮ್ ಖಾತೆಯಿಂದ ಮೆಸೆಜ್‍ಗಳು ಮಾಡಿ ಪಿರ್ಯಾದುದಾರರಿಗೆ ಅತಿ ಸಲುಗೆಯಿಂದ ಚಾಟ್ ಮಾಡುವಂತೆ ಆರೋಪಿ ಒತ್ತಾಯಿಸಿದ್ದಾನೆ.
ಚಾಟ್ ಮಾಡದಿದ್ದರೆ ನಿಮ್ಮ ನಗ್ನ ವಿಡಿಯೋ ತನ್ನ ಬಳಿ ಇದೆ ಎಂದು ಹೆದರಿಸಿದ್ದಾನೆ. ಪಿರ್ಯಾದುದಾರರು ಮೆಸೇಜ್‍ಗಳನ್ನು ನಿರ್ಲಕ್ಷಿಸಿದಾಗ ಪಿರ್ಯಾದುದಾರರಿಗೆ ಸ್ಯಾಂಪಲ್ ಎಂದು ಒಂದು ವಿಡಿಯೋವನ್ನು ಆರೋಪಿಯು ಇನ್‍ಸ್ಟಾಗ್ರಾಮ್ ಮೆಸೆಂಜರ್‍ನಲ್ಲಿ ಅಪ್‍ಲೋಡ್ ಮಾಡಿದ್ದು, ಅದನ್ನು ನೋಡಿ ಪಿರ್ಯಾದುದಾರರು ಆತಂಕಗೊಂಡರು.
ಏಕೆಂದರೆ ಆ ವಿಡಿಯೋ ಪಿರ್ಯಾದುದಾರರಸಲಿ ವಿಡಿಯೋ ಆಗಿದ್ದು, ಅದನ್ನು ಆಕೆಯ ಖಾಸಗಿ ರೂಮ್‍ನಲ್ಲೇ ಚಿತ್ರೀಕರಿಸಲಾಗಿರುವುದು ತಿಳಿದು ತಕ್ಷಣ ಪಿರ್ಯಾದುದಾರರು ಸಿಇಎನ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡ ಪೊಲೀಸರು ಮೈಸೂರಿನಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಯು ಪಿರ್ಯಾದುದಾರರ ಪರಿಚಯ ಸ್ಥನಾಗಿದ್ದು, ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ರೂಮ್‍ನಲ್ಲಿ ಮೊಬೈಲ್ ಚಾರ್ಜರ್ ರೀತಿಯಲ್ಲಿ ಕಾಣುವ ಸ್ಪೈ ಕ್ಯಾಮೆರಾವನ್ನು ಅಳವಿಡಿಸಿದ್ದು,
ಪಿರ್ಯಾದುದಾರರು ಮೊಬೈಲ್ ಚಾರ್ಜರ್ ಎಂದು ತಿಳಿದು, ಅನುಮಾನಿಸದೆ ಇದ್ದ ಸಂದರ್ಭದಲ್ಲಿ ಇವರ ಖಾಸಗಿ ದೃಶ್ಯಾವಳಿಗಳು ಚಿತ್ರೀಕರಣಗೊಂಡಿರುವುದು ವಿಚಾರಣೆಯಿಂದ ಗೊತ್ತಾಗಿದೆ.
ಆರೋಪಿಯಿಂದ ಸ್ಪೈ ಕ್ಯಾಮೆರಾ, ಲ್ಯಾಪ್‍ಟಾಪ್ 2 ಮೆಮೊರಿ ಕಾರ್ಡ್, ಪೆನ್‍ಡ್ರೈವ್, 2 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಅನೂಪ್ ಎ ಶೆಟ್ಟಿ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆ ಇನ್‍ಸ್ಪೆಕ್ಟರ್ ಸಂತೋಷ್ ರಾಮ್ ಅವರನ್ನೊಳಗೊಂಡ ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡಿದ್ದರು.