ಸೋರುತಿಹುದು ಚಿನ್ನಸ್ವಾಮಿ ಸ್ಟೇಡಿಯಂ ಮೇಲ್ಛಾವಣಿ.. ಟ್ರೋಲ್ಗೆ ತುತ್ತಾದ BCCI

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಪಂದ್ಯಗಳ ಸರಣಿಯು 2-2 ಅಂತರದೊಂದಿಗೆ ಅಂತ್ಯವಾಗಿದೆ. ನಿನ್ನೆ ಬೆಂಗಳೂರಿನಲ್ಲಿ ನಡೆಯ ಬೇಕಿದ್ದ 5ನೇ ಹಾಗೂ ಅಂತಿಮ ಪಂದ್ಯದ ಸಮಯದಲ್ಲಿ ಮಳೆ ಬಂದ ಕಾರಣ ಮ್ಯಾಚ್ ರದ್ದಾಯಿತು.
ಇದರೊಂದಿಗೆ 5 ಪಂದ್ಯಗಳ ಸರಣಿಯು ಸಮಬಲದೊಂದಿಗೆ ಅಂತ್ಯಗೊಂಡಿತು. ಆದರೆ ಈ ಪಂದ್ಯದ ಬಳಿಕ ಬಿಸಿಸಿಐ ಸಖತ್ ಟ್ರೋಲ್ ಆಗುತ್ತಿದೆ.
ಅದಕ್ಕೆ ಕಾರಣ ಚಿನ್ನಸ್ವಾಮಿ ಸ್ಟೇಡಿಯಂನ ಈ ದುಸ್ಥಿತಿ.ನಿನ್ನೆ ಪಂದ್ಯ ವೇಳೆ ಬೆಂಗಳೂರಿನಲ್ಲಿ ಸುರಿದ ಮಳೆಯಿಂದಾಗಿ ಚಿನ್ನಸ್ವಾಮಿ ಸ್ಟೇಡಿಯಂನ ಅವ್ಯವಸ್ಥೆ ಬೆಳಕಿಗೆ ಬಂದಿದೆ. ನಿನ್ನೆ ಸುರಿದ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತ್ತು.
ಮಳೆ ನಿಂತ ಬಳಿಕ ಪಂದ್ಯ ಮುಂದುವರೆಯುವ ನಿರೀಕ್ಷೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಸ್ಟೇಡಿಯಂನಲ್ಲಿ ಕಾದು ಕುಳಿತಿದ್ದರು. ಹೀಗೆ ಮಳೆಯಿಂದ ಮ್ಯಾಚ್ ಸ್ಥಗಿತಗೊಂಡು ನಿರಾಸೆಯಲ್ಲಿದ್ದವರಿಗೆ ಮತ್ತೊಂದು ಬೇಸರದ ಸಂಗತಿ ಕಾದಿತ್ತು.
ಕುಳಿತಲ್ಲಿ ಕೂರಲಾಗದೆ ಪ್ರೇಕ್ಷಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಎಂ.ಚಿನ್ನಸ್ವಾಮಿ ಸ್ಟೇಡಿಯಂನ ಛಾವಣಿ ಸೋರಲು ಶುರುವಾಗಿದ್ದೇ ಇದೆಲ್ಲದಕ್ಕೂ ಮುಖ್ಯ ಕಾರಣವಾಗಿದ್ದು.
ಇದೀಗ ಚಿನ್ನಸ್ವಾಮಿ ಸ್ಟೇಡಿಯಂನ ಈ ಅವ್ಯವಸ್ಥೆಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಳೆದ ವಾರ 48,000 ಕೋಟಿ ರೂಪಾಯಿ ಮೌಲ್ಯದ ಬಂಪರ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಧ್ಯಮ ಹಕ್ಕುಗಳ ಒಪ್ಪಂದವನ್ನು ಘೋಷಿಸಿತು.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಹಣವನ್ನು ಕ್ರೀಡಾಂಗಣಗಳು ಮತ್ತು ಸೌಲಭ್ಯಗಳನ್ನು ನವೀಕರಿಸಲು ಬಳಸಲಾಗುವುದು ಎಂದು ಭರವಸೆ ನೀಡಿದ್ದರು.
ಆದರೆ ಇದೀಗ ಚಿನ್ನಸ್ವಾಮಿ ಸ್ಟೇಡಿಯಂನ ಈ ದುಸ್ಥಿತಿಯಿಂದಾಗಿ ಬಿಸಿಸಿಐ ಸದ್ಯ ಟ್ರೋಲಿಗರಿಗೆ ಆಹಾರವಾಗಿದೆ.