ಸೋನಿಯಾ- ಗೆಹ್ಲೋಟ್ ಭೇಟಿ ರಾಜಸ್ತಾನ ಬಿಕ್ಕಟ್ಟು ಶೀಘ್ರ ಅಂತ್ಯ

ರಾಜಸ್ತಾನ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಬಿಕ್ಕಟ್ಟು ಒಂದೆರಡು ದಿನಗಳಲ್ಲಿ ಅಂತ್ಯವಾಗುವ ಸಾಧ್ಯತೆ ಹೆಚ್ಚಾಗಿದೆ.ಇಂದು ಇಲ್ಲವೆ ನಾಳೆ ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ರಾಜಸ್ತಾನದ ರಾಜಕೀಯ, ವಿದ್ಯಮಾನಗಳನ್ನು ವಿವರಿಸಿ ಬಿಕ್ಕಟ್ಟು ಅಂತ್ಯಗೊಳಿಸುವ ಸಾಧ್ಯತೆ ಇದೆ.
ಗೆಹ್ಲೋಟ್ ನಿಷ್ಠರಾಗಿರುವ ಮೂರು ಮಂದಿ ಶಾಸಕರ ಅಶಿಸ್ತು ವರ್ತನೆಗೆ ಕೆಂಡಾಮಂಡಲವಾಗಿದ್ದ ಕಾಂಗ್ರೆಸ್ ಹೈಕಮಾಂಡ್ ನೋಟಿಸ್ ಜಾರಿ ಮಾಡಿ ವಿವರಣೆ ನೀಡುವಂತೆ ಸೂಚನೆ ನೀಡಿತ್ತು.
ಹೀಗಾಗಿ ಗೆಹ್ಲೋಟ್ ಸೋನಿಯಾ ಅವರನ್ನು ಭೇಟಿ ಮಾಡಿ ರಾಜಕೀಯ ವಿದ್ಯಮಾನಗಳನ್ನೆಲ್ಲಾ ಮನವರಿಕೆ ಮಾಡಿಕೊಡಲಿದ್ದಾರೆ.ಗೆಹ್ಲೋಟ್ ಬೆಂಬಲಿಗರು ಹೈಕಮಾಂಡ್‌ನ ಸೂಚನೆ ಧಿಕ್ಕರಿಸಿ ಬಂಡಾಯವೆದಿದ್ದರಿಂದ ಮುಂದಿನ ತಿಂಗಳು ನಡೆಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಮೇಲೆ ಪರಿಣಾಮ ಬೀರಿ ಗೆಹ್ಲೋಟ್ ಚುನಾವಣಾ ಕಣದಿಂದ ಹಿಂದೆ ಸರಿಯುವಂತಾಯಿತು.
ಸೋನಿಯಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ನಂತರ ಮುಂದೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಗೆಹ್ಲೋಟ್ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ರಾಜಸ್ತಾನದ ಬಿಕ್ಕಟ್ಟು ಪರಿಹಾರವಾಗಲಿದೆ. ಸೋನಿಯಾಗಾಂಧಿ ಇಲ್ಲವೆ ರಾಹುಲ್ ವಿರುದ್ಧ ರಾಜಸ್ತಾನದ ಬಂಡಾಯ ಶಾಸಕರು ಅಪಸ್ವರ ಎತ್ತಿಲ್ಲ.
ಮುಖ್ಯಮಂತ್ರಿಯಾಗಿ ಗೆಹ್ಲೋಟ್ ಮುಂದುವರೆಯಬೇಕೆಂಬುದೇ ಅವರ ಅಪೇಕ್ಷೆಯಾಗಿತ್ತು. ಹೀಗಾಗಿ ಸಮಸ್ಯೆ ಬಗೆಹರಿಯಲಿದೆ.ರಾಜಸ್ತಾನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಕೆಲ ನಾಯಕರ ತೀವ್ರ ಅಶಿಸ್ತಿಗೆ ಗರಂ ಆಗಿರುವ ಹೈಕಮಾಂಡ್, ಈ ಕುರಿತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಿಷ್ಠರಿಂದ ಉತ್ತರ ಬಯಸಿದೆ.ಗಂಭೀರ ಅಶಿಸ್ತಿನ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು.
೧೦ ದಿನಗಳೊಳಗೆ ಉತ್ತರಿಸುವಂತೆ ಕಾಂಗ್ರೆಸ್ ಹೈಕಮಾಂಡ್, ಸಚಿವರು ಮತ್ತು ಶಾಸಕರಿಬ್ಬರನ್ನೂ ಕೇಳಿದೆ ಎಂದು ಮೂಲಗಳು ತಿಳಿಸಿವೆ.ರಾಜಸ್ಥಾನದಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಿಸ್ತು ಸಮಿತಿ ರಾಜಸ್ಥಾನದ ಸಚಿವರಾದ ಶಾಂತಿ ಧರಿವಾಲ್ ಮತ್ತು ಮಹೇಶ್ ಜೋಶಿ ಮತ್ತು ಶಾಸಕ ಧರ್ಮೇಂದ್ರ ರಾಥೋಡ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ, ಆದರೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಯಾವುದೇ ಕ್ರಮಕ್ಕೆ ಸೂಚಿಸಿಲ್ಲ ಎನ್ನಲಾಗಿದೆ.
ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ದೆಹಲಿಗೆ ಭೇಟಿ ನೀಡಿ ಹೈಕಮಾಂಡ್‌ಗೆ ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಮೂವರ ನಿಷ್ಠರ ವಿರುದ್ದ ಕ್ರಮ:ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಮೂವರು ನಿಷ್ಠಾವಂತರ ವಿರುದ್ಧ ಶಿಸ್ತು ಕ್ರಮಕ್ಕೆ ಕಾಂಗ್ರೆಸ್ ವೀಕ್ಷಕರು ಶಿಫಾರಸು ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಪಕ್ಷದ ವೀಕ್ಷಕರಾದ ರಾಜ್ಯಸಭೆ ವಿರೋದ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕನ್ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ತಮ್ಮ ವರದಿಯನ್ನು ಸಲ್ಲಿಸಿದರು,ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಸೇರುವ ಬದಲು ಶಾಸಕರ ಸಮಾನಾಂತರ ಸಭೆ ಆಯೋಜಿಸಿದ ಕೆಲವು ನಾಯಕರ ಕಡೆಯಿಂದ “ತೀವ್ರ ಅಶಿಸ್ತು” ಪ್ರದರ್ಶಿಸಿದ್ದಾರೆ ಎಂದು ತಿಳಿಸಿದ್ದಾರೆ.