
ಶಿವಮೊಗ್ಗ: ನಗರದ ಸರಕಾರಿ ಬಸ್ ನಿಲ್ದಾಣ ಸಮೀಪದ ಲಾಡ್ಜ್‌ವೊಂದರಲ್ಲಿ ತುಮಕೂರು ಮೂಲದ ವ್ಯಕ್ತಿಯೊಬ್ಬರು ಗುರುವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ನಿವಾಸಿ ಮಂಜುನಾಥ್ (26) ಮೃತರು. ಸೆಪ್ಟೆಂಬರ್ 13 ರಂದು ಬಂದು ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡಿದ್ದ ಮಂಜುನಾಥ್ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಠಡಿಯಿಂದ ವಾಸನೆ ಬಂದ ಹಿನ್ನೆಲೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಪರಿಶೀಲಿಸಿದಾಗ ಮಂಜುನಾಥ್ ಅವರು ಮೃತಪಟ್ಟಿದ್ದು ಬೆಳಕಿಗೆ ಬಂದಿದೆ.
ಡೆತ್ ನೋಟ್‌ನಲ್ಲಿ ಏನಿದೆ?ಹುಳಿಯಾರು ನಿವಾಸಿ ಮಂಜುನಾಥ್ ಅವರು ಡೆತ್ ನೋಟ್ ಬರೆದಿಟ್ಟಿದ್ದು, ಸಹೋದರಿಯನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಸಹೋದರಿ ಸುಧಾ ಅವರು ಹುಳಿಯಾರು ಠಾಣೆಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇಲಾಖೆಯ ಮತ್ತೊಬ್ಬ ಸಿಬ್ಬಂದಿಯೊಂದಿಗೆ ಸಂಬಂಧವಿದ್ದು, ಇಬ್ಬರೂ ಸೇರಿ ಗಂಡನನ್ನು ಕೊಲೆ ಮಾಡಿರುವುದಾಗಿ ಡೆತ್ ನೋಟ್‌ನಲ್ಲಿ ಆರೋಪಿಸಿದ್ದಾರೆ.
ಸಹೋದರಿಯ ಪತಿಯ ಕೊಲೆಯಿಂದಾಗಿ ಮಾನಸಿಕವಾಗಿ ನೋವಾಗಿದ್ದು, ಈ ಕಾರಣಕ್ಕಾಗಿ ಸಹೋದರಿಯನ್ನೂ ಸಾಯಿಸುವುದಾಗಿ ತಿಳಿಸಿದ್ದಾರೆ.
ಸಾಯುವುದಕ್ಕಾಗಿಯೇ ಶಿವಮೊಗ್ಗಕ್ಕೆ ಆಗಮಿಸಿದ್ದು, ತನ್ನ ಶವವನ್ನು ಸಾಯುವ ಜಾಗದಲ್ಲಿಯೇ ಸುಡಬೇಕು ಎಂದು ಮನವಿ ಮಾಡಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ದಿನಗಳಿಂದ ಸುಧಾ ನಾಪತ್ತೆ ಮಂಜುನಾಥ್ ಅವರ ಸಹೋದರಿ ಸುಧಾ ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದು, ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.