ಅಪರಾಧಪೊಲೀಸ್ಬೆಂಗಳೂರುರಾಜ್ಯರಾಷ್ಟ್ರಿಯ

ಸೈಬರ್‌ ಅಪರಾಧಿಗಳ ವಿರುದ್ಧ ‘ಆಪರೇಷನ್‌ ಚಕ್ರ’, ಬೆಂಗಳೂರು ಸೇರಿ ದೇಶದ 115 ಕಡೆ ಸಿಬಿಐ ದಾಳಿ

ಬೆಂಗಳೂರು: ಸೈಬರ್‌ ಕ್ರೈಂ ಅಪರಾಧಿಗಳ ವಿರುದ್ಧ ಸಮರ ಸಾರಿರುವ ಸಿಬಿಐ ಅಧಿಕಾರಿಗಳು ಕರ್ನಾಟಕ ಸೇರಿದಂತೆ ದೇಶದ 115 ಕಡೆ ಬುಧವಾರ ದಾಳಿ ನಡೆಸಿ 16 ಮಂದಿಯನ್ನು ಬಂಧಿಸಿದ್ದು, 1.8 ಕೋಟಿ ರೂ. ನಗದು ಮತ್ತು 1.5 ಕೆ.ಜಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.’

ಆಪರೇಷನ್‌ ಚಕ್ರ’ ಅಡಿ ದೇಶದೆಲ್ಲೆಡೆ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿರುವ ಸಿಬಿಐ ಅಧಿಕಾರಿಗಳು ಸೈಬರ್‌ ಅಪರಾಧಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಇಂಟರ್‌ಪೋಲ್‌, ಕೆನಡಾ ಮತ್ತು ಆಸ್ಪ್ರೇಲಿಯಾ ಪೊಲೀಸರು, ಅಮೆರಿಕ ಫೆಡರಲ್‌ ಬ್ಯೂರೊ ಆಫ್‌ ಇನ್ವೆಸ್ಟಿಗೇಷನ್‌, ದೇಶದ 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್‌ ಪಡೆಯ ಸಹಯೋಗದೊಂದಿಗೆ ಈ ಕಾರ್ಯಾಚರಣೆ ನಡೆಸಲಾಗಿದೆ.

ಆನ್‌ಲೈನ್‌ ಮೂಲಕ ಹಣಕಾಸು ವಂಚನೆ, ಬ್ಯಾಂಕಿಂಗ್‌ ವಂಚನೆ ಸೇರಿದಂತೆ ಆರ್ಥಿಕ ಅಪರಾಧ ಕೃತ್ಯ ಎಸಗುವವರನ್ನು ಮಟ್ಟ ಹಾಕುವ ಉದ್ದೇಶಕ್ಕೆ ಸಿಬಿಐ ಅಧಿಕಾರಿಗಳು ಹೊಸದಿಲ್ಲಿ, ಪಂಜಾಬ್‌, ರಾಜಸ್ತಾನ, ಅಸ್ಸಾಂ, ಕರ್ನಾಟಕ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ, ಚಂಡೀಗಢ, ಹರಿಯಾಣ ಸೇರಿದಂತೆ ಹಲವೆಡೆ ದಾಳಿ ನಡೆಸಿದ್ದಾರೆ.

ಅಂತಾರಾಷ್ಟ್ರೀಯ ಸೈಬರ್‌ ಅಪರಾಧಿಗಳಿಗೆ ಹಣಕಾಸು ನೆರವು ಸೇರಿದಂತೆ ಎಲ್ಲಾ ಬಗೆಯ ಸವಲತ್ತುಗಳಿಗೆ ಕಡಿವಾಣ ಹಾಕಲು ಹಾಗೂ ಸೈಬರ್‌ ಅಪರಾಧ ಕೃತ್ಯಗಳನ್ನು ಮಟ್ಟ ಹಾಕಲು ಈ ಕಾರ್ಯಾಚರಣೆ ನಡೆಸಲಾಗಿದೆ.

ಜಾಗತಿಕ ಸಂಘಟಿತ ಸೈಬರ್‌ ಅಪರಾಧಗಳ ವಿರುದ್ಧ ದೇಶದ ಹೋರಾಟವು ಮಹತ್ವದ ಮೈಲಿಗಲ್ಲು ಸಾಧಿಸಿದೆ ಎಂದು ಸಿಬಿಐ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಟ್ಟಾರೆ 115 ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ. ಸಿಬಿಐ 16 ರಾಜ್ಯಗಳು ಸೇರಿದಂತೆ ಸುಮಾರು 87 ಸ್ಥಳಗಳಲ್ಲಿ ಪರಿಶೀಲನೆ ಮಾಡುತ್ತಿದೆ. ಇನ್ನುಳಿದ ಪ್ರದೇಶಗಳಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.

ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದ 4 ಕಡೆ, ಹೊಸದಿಲ್ಲಿಯಲ್ಲಿ 5, ಚಂಡೀಗಢದಲ್ಲಿ 3, ಕರ್ನಾಟಕದಲ್ಲಿ 12, ಅಸ್ಸಾಂ ಮತ್ತು ಪಂಜಾಬ್‌ನ ತಲಾ 2 ಸ್ಥಳಗಳಲ್ಲಿ ಶೋಧ ನಡೆಯುತ್ತಿದೆ.

ಪುಣೆ ಮತ್ತು ಅಹಮದಾಬಾದ್‌ನಲ್ಲಿರುವ 2 ಕಾಲ್‌ಸೆಂಟರ್‌ಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಡಾರ್ಕ್ ವೆಬ್‌ನಲ್ಲಿನ ಹಣಕಾಸು ವಹಿವಾಟುಗಳು ಮತ್ತು ಸೈಬರ್‌ ಅಪರಾಧ ಕೃತ್ಯಗಳ ವಿವರ ಒಳಗೊಂಡಿರುವ ಮೊಬೈಲ್‌, ಲ್ಯಾಪ್‌ಟಾಪ್‌ನಂತಹ ಡಿಜಿಟಲ್‌ ಪುರಾವೆಗಳನ್ನು ವಶಪಡಿಸಿಕೊಂಡಿದ್ದೇವೆ.

ಕರ್ನಾಟಕದಲ್ಲಿ ಸೈಬರ್‌ ಅಪರಾಧಿಗಳ ಬ್ಯಾಂಕ್‌ ಖಾತೆಗಳಲ್ಲಿ 1.89 ಕೋಟಿ ರೂ. ಪತ್ತೆಯಾಗಿದ್ದು, ಆ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button