
ಕಡಿಮೆ ಬೆಲೆಗೆ ಸೈಟ್ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಸೈಟ್ ಕೊಡದೆ ವಂಚಿಸಿದ ಚಿತ್ರ ನಿರ್ಮಾಪಕ ಸೇರಿದಂತೆ ನಾಲ್ವರನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿತ್ರ ನಿರ್ಮಾಪಕ ಮಂಜುನಾಥ್, ಕೆ.ಕೆ.ಶಿವಕುಮಾರ್, ಚಂದ್ರಶೇಖರ್ ಮತ್ತು ಸಿ.ಶಿವಕುಮಾರ್ ಬಂಧಿತರು.
ನಟ ಕೋಮಲ್ ಅಭಿನಯದ ಲೊಡ್ಡೆ ಸಿನಿಮಾವನ್ನು ಮಂಜುನಾಥ್ ನಿರ್ಮಾಣ ಮಾಡಿದ್ದು, ತೆರೆಕಂಡಿಲ್ಲ. ಅದರಿಂದಾಗಿ ನಿರ್ಮಾಪಕ ನಷ್ಟ ಅನುಭವಿಸಿದ್ದರು. ತದನಂತರ ರಾಜಾಜಿನಗರದಲ್ಲಿ ಈಗಲ್ ಟ್ರೀ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಹೆಸರಿನಲ್ಲಿ ಮಂಜುನಾಥ್ ರಿಯಲ್ ಎಸ್ಟೇಟ್ ಕಚೇರಿ ತೆರೆದಿದ್ದಾರೆ.
ಕಡಿಮೆ ದರದಲ್ಲಿ ಸೈಟ್ ಕೊಡಿಸುವುದಾಗಿ ಜಾಹಿರಾತು ಪ್ರಕಟಿಸಿದ್ದನ್ನು ಕಂಡು ಹಲವಾರು ಸಾರ್ವಜನಿಕರು ಸೈಟ್ ಕೊಳ್ಳುವ ಸಲುವಾಗಿ ಕಚೇರಿಯನ್ನು ಸಂಪರ್ಕಿಸಿದ್ದಾರೆ. ಮುಂಗಡ ಹಣ ಕೊಟ್ಟವರಿಗೆ ಸೈಟ್ ತೋರಿಸುವುದಾಗಿ ಕರೆದೊಯ್ದು ಯಾರದ್ದೋ ಸೈಟ್ ತೋರಿಸಿ ಅವರ ನಂಬಿಕೆ ಗಳಿಸಿ ಹಂತ ಹಂತವಾಗಿ ಲಕ್ಷಾಂತರ ಹಣ ಪಡೆದುಕೊಂಡಿದ್ದಾನೆ.
ಹಣ ಕೊಟ್ಟವರು ಸೈಟ್ ದಾಖಲೆಗಳನ್ನು ಕೇಳಿದಾಗ ಸ್ವಲ್ಪ ದಿನಗಳಲ್ಲೇ ದಾಖಲೆ ಕೊಡುವುದಾಗಿ ನಂಬಿಸಿದ್ದಾನೆ. ಹಣ ಕೊಟ್ಟವರಿಂದ ಒತ್ತಡ ಜಾಸ್ತಿಯಾದಾಗ ಕಚೇರಿಗೆ ಬೀಗ ಹಾಕಿ ಮಂಜುನಾಥ್ ನಾಪತ್ತೆಯಾಗಿದ್ದ.ಸೈಟ್‍ಗಾಗಿ ಹಣ ಕೊಟ್ಟು ಕಳೆದುಕೊಂಡ 6 ಮಂದಿ ರಾಜಾಜಿನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ನಿರ್ಮಾಪಕ ಸೇರಿ ನಾಲ್ವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.