
ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಮೂರು ಜಿಲ್ಲೆಗಳಲ್ಲಿ ಉಚಿತವಾಗಿ ಸೇನಾ ಆಯ್ಕೆ ಪೂರ್ವ ತರಬೇತಿ ನೀಡಲು ಶಾಲೆಗಳನ್ನು ಆರಂಭಿಸಲು ಮುಂದಾಗಿದೆ.
ಸೇನೆಗೆ ಸೇರುವ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲು ಈ ಶಾಲೆಯನ್ನು ಆರಂಭಿಸಲಾಗುತ್ತಿದೆ.
ಶಾಲೆ ಆರಂಭಿಸುವ ಕುರಿತು ಇಲಾಖೆ ಈಗಾಗಲೇ ಅಕೃತ ಆದೇಶ ಹೊರಡಿಸಿದೆ.ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಈ ಶಾಲೆಗಳು ಆರಂಭವಾಗಲಿವೆ.ಸೇನಾ ಪೂರ್ವ ಆಯ್ಕೆ ತರಬೇತಿ ಶಾಲೆ ಆರಂಭಿಸುವ ಕುರಿತು ಅಸೂಚನೆ ಹೊರಡಿಸಿದೆ.
ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ತರಬೇತಿ ವೆಚ್ಚವನ್ನು ಇಲಾಖೆಯಿಂದ ಹಾಗೂ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳ ತರಬೇತಿ ವೆಚ್ಚವನ್ನು ಸಮಾಜಕಲ್ಯಾಣ ಇಲಾಖೆಯಿಂದ ಭರಿಸಲಾಗುತ್ತದೆ. ವಾರ್ಷಿಕ 67.50 ರೂ. ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀರರಾಣಿ ಅಬ್ಬಕ್ಕ, ಉಡುಪಿಯಲ್ಲಿ ಕೋಟಿ ಚಿನ್ನಯ್ಯ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹೆಂಜಾ ನಾಯಕ ಹೆಸರಿನಲ್ಲಿ ತರಬೇತಿ ಶಾಲೆಗಳು ಆರಂಭವಾಗಲಿದೆ.
ಈ ಶಾಲೆಗಳ ಪರಿಕಲ್ಪನೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರದ್ದು. ಸೇನೆಗೆ ಸೇರುವ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಸೂಕ್ತ ತರಬೇತಿ ನೀಡುವುದು ಶಾಲೆಗಳ ಉದ್ದೇಶವಾಗಿದೆ.
ಕರಾವಳಿ ಭಾಗದಿಂದ ಹಲವು ಮಂದಿ ಸೇನೆಗೆ ಸೇರಲು ಬಯಸಿದರೂ ನಾನಾ ಕಾರಣದಿಂದ ವಿಫಲರಾಗುತ್ತಿದ್ದಾರೆ. ಅವರನ್ನು ದೈಹಿಕವಾಗಿ ಮತ್ತು ಲಿಖಿತ ಪರೀಕ್ಷೆಗೆ ತರಬೇತಿಗೊಳಿಸಲು ಶಾಲೆಗಳನ್ನು ಆರಂಭಿಸಲಾಗುತ್ತಿದೆ.
ಈ ಶಾಲೆಗಳಲ್ಲಿ ವಸತಿ ಸಹಿತವಾಗಿ ಸುಮಾರು ನಾಲ್ಕು ತಿಂಗಳ ಕಾಲ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ. ಪ್ರತಿ ಶಾಲೆಯಲ್ಲಿ 100 ಅಭ್ಯರ್ಥಿಗಳಿಗೆ ತರಬೇತಿ ನೀಡಲು ಇಲಾಖೆ ಚಿಂತನೆ ನಡೆಸಿದೆ.