
ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ಸೆ.12ರಿಂದ ಆರಂಭವಾಗುವ ಹಿನ್ನೆಲೆಯಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸಭಾಂಗಣ ಹಾಗೂ ಮೊಗಸಾಲೆಗಳನ್ನು ಶುಚಿಗೊಳಿಸುವ ಕಾರ್ಯದಲ್ಲಿ ಸಿಬ್ಬಂದಿ ತೊಡಗಿದ್ದಾರೆ.
ಉಭಯ ಸದನಗಳನ್ನು ಶುಚಿಗೊಳಿಸಿ ಅಲಂಕಾರಿಕ ಗಿಡಗಳು ಹಾಗೂ ಹೂವುಗಳಿಂದ ಸಿಂಗಾರಗೊಳಿಸುವ ಕಾರ್ಯ ಭರದಿಂದ ಸಾಗಿದೆ.
ಇದರೊಂದಿಗೆ ಅಧಿವೇಶನದ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ.ವಿಧಾನಸಭೆ ಹಾಗೂ ವಿಧಾನ ಪರಿಷತ್‍ಗೆ ಸದಸ್ಯರು ಆಗಮಿಸುವ ದ್ವಾರಗಳು, ಮೊಗಸಾಲೆಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಿನ್ನೆಯಿಂದ ಆರಂಭವಾಗಿದೆ.
ಸದಸ್ಯರು ಸದನ ಪ್ರವೇಶಿಸುವ ಹಾಗೂ ನಿರ್ಗಮಿಸುವ ದ್ವಾರಗಳನ್ನು ಅಲಂಕಾರಿಕ ಗಿಡಳಿಂದ ಅಲಂಕರಿಸಲಾಗುತ್ತಿದೆ. ಅಲ್ಲದೆ, ವಿಧಾನಸಭೆಯ ಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿ ಪೀಠಗಳನ್ನು ಹೂವುಗಳಿಂದ ಅಲಂಕರಿಸಲಾಗುತ್ತಿದೆ.
ಕಳೆದ ಮಾರ್ಚ್‍ನಲ್ಲಿ ಬಜೆಟ್ ಅಧಿವೇಶನ ನಡೆದಿತ್ತು. ಆನಂತರ ಯಾವುದೇ ಅಧಿವೇಶನ ನಡೆದಿರಲಿಲ್ಲ. ಸೆ.12ರಿಂದ ಹತ್ತು ದಿನಗಳ ಕಾಲ ಮಳೆಗಾಲದ ಅಧಿವೇಶನ ನಡೆಯಲಿದೆ.
ರಾಜ್ಯದಲ್ಲಿ ಭಾರೀ ಪ್ರವಾಹ, ಅತಿವೃಷ್ಟಿ ಉಂಟಾಗಿ ಸಾಕಷ್ಟು ಅನಾಹುತ ಉಂಟಾಗಿರುವ ವಿಚಾರ ಈ ಅಧಿವೇಶನದಲ್ಲಿ ಪ್ರಮುಖವಾಗಿ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ವಾಕ್ಸಮರಕ್ಕೆ ವೇದಿಕೆಯಾಗಲಿದೆ.