ಅಪರಾಧರಾಷ್ಟ್ರಿಯ

ಸೆಕ್ಯುರಿಟಿ ಗಾರ್ಡ್‌ಗಳೇ ಈ ಸರಣಿ ಹಂತಕನ ಟಾರ್ಗೆಟ್

ಭೋಪಾಲ್: ನಿದ್ರೆಯಲ್ಲಿದ್ದ ನಾಲ್ವರು ಸೆಕ್ಯುರಿಟಿ ಗಾರ್ಡ್‌ಗಳನ್ನು ಹತ್ಯೆ ಮಾಡಿದ ಮಧ್ಯಪ್ರದೇಶದ ಸೀರಿಯಲ್ ಕಿಲ್ಲರ್‌ನನ್ನು ಬಂಧಿಸಲಾಗಿದೆ. ತನ್ನ ಬಲಿಪಶುಗಳಲ್ಲಿ ಒಬ್ಬಾತನ ಕೊಲೆ ಸಂದರ್ಭದಲ್ಲಿ ಆತನ ಚಹರೆಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.

ಬಂಧಿತನನ್ನು 19 ವರ್ಷದ ಶಿವಪ್ರಸಾದ್ ಧುರ್ವೆ ಎಂದು ಗುರುತಿಸಲಾಗಿದೆ. ಈತ ಕನ್ನಡದ ಪ್ಯಾನ್ ಇಂಡಿಯಾ ಬ್ಲಾಕ್‌ಬಸ್ಟರ್ ಸಿನಿಮಾ ‘ಕೆಜಿಎಫ್’ನಿಂದ ಪ್ರೇರಣೆಗೊಂಡಿದ್ದ ಮತ್ತು ಪ್ರಸಿದ್ಧಿ ಪಡೆಯಲು ಬಯಸಿದ್ದ ಎಂದು ಮೂಲಗಳು ತಿಳಿಸಿವೆ.

ಸರಣಿ ಹಂತಕ ಶಿವಪ್ರಸಾದ್‌ನನ್ನು ಭೋಪಾಲ್‌ನಲ್ಲಿ ಶುಕ್ರವಾರ ಮುಂಜಾನೆ ಬಂಧಿಸಲಾಗಿದೆ. ತನ್ನ ಬಲಿಪಶುಗಳಲ್ಲಿ ಒಬ್ಬಾತನ ಮೊಬೈಲ್ ಫೋನ್ ಅನ್ನು ಆತ ಕಳವು ಮಾಡಿದ್ದ. ಅದರ ಬೆನ್ನತ್ತಿದ್ದ ಪೊಲೀಸರಿಗೆ ಕೊಲೆಗಡುಕ ಸಿಕ್ಕಿಬಿದ್ದಿದ್ದಾನೆ.

ಅಂಗಿ ಮತ್ತು ಶಾರ್ಟ್ಸ್ ಧರಿಸಿದ ವ್ಯಕ್ತಿ, ಮಲಗಿ ನಿದ್ರಿಸುತ್ತಿದ್ದ ಸೆಕ್ಯುರಿಟಿ ಗಾರ್ಡ್ ತಲೆಯನ್ನು ಕಲ್ಲಿನಿಂದ ಜಜ್ಜಿ, ಅಲ್ಲಿಂದ ಮಿಸುಕಾಡಲೂ ಸಾಧ್ಯವಾಗದಂತೆ ಬರ್ಬರವಾಗಿ ಹತ್ಯೆ ಮಾಡುವ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತನ್ನನ್ನು ಯಾರೂ ನೋಡುತ್ತಿಲ್ಲ ಎಂದು ಖಚಿತವಾದ ಬಳಿಕ ಆತ ಅಲ್ಲಿಂದ ಪಲಾಯನ ಮಾಡಿದ್ದಾನೆ.

ಇನ್ನೂ ಸರಿಯಾಗಿ ಮೀಸೆ ಬಲಿಯದ ಈ ತರುಣ, ತಡರಾತ್ರಿಗಳಲ್ಲಿಯೇ ತನ್ನ ಕೃತ್ಯ ಎಸಗುತ್ತಿದ್ದ. ರೌಡಿಸಂ, ಕೊಲೆ, ಹೊಡೆದಾಟಗಳ ಸುತ್ತಲೂ ನಡೆಯುವ ಕನ್ನಡದ ಕೆಜಿಎಫ್ ಸಿನಿಮಾದ ಕಥೆಗಳಿಂದ ಆತ ಪ್ರಭಾವಿತಗೊಂಡಿದ್ದ ಎಂದು ಪೊಲೀಸ್ ಅಧಿಕಾರಿ ತರುಣ್ ನಾಯಕ್ ಹೇಳಿದ್ದಾರೆ.

ನಾಲ್ವರು ಸೆಕ್ಯುರಿಟಿ ಗಾರ್ಡ್‌ಗಳನ್ನು ಹತ್ಯೆ ಮಾಡಿದ್ದ ಆತ, ನಂತರ ಪೊಲೀಸರನ್ನು ತನ್ನ ಟಾರ್ಗೆಟ್‌ಗಳನ್ನಾಗಿ ಮಾಡಿಕೊಳ್ಳಲು ಯೋಜನೆ ರೂಪಿಸಿದ್ದ ಎಂದು ತಿಳಿಸಿದ್ದಾರೆ.

ಈ ಎಲ್ಲ ಹತ್ಯೆಗಳೂ ಒಂದೇ ಸ್ವರೂಪದಲ್ಲಿ ನಡೆದಿದ್ದವು. ಕಗ್ಗತ್ತಲ ರಾತ್ರಿಗಳಲ್ಲಿ ಮಾತ್ರವೇ ನಿರ್ದಿಷ್ಟ ಸ್ವರೂಪದಲ್ಲಿ ದಾಳಿ ನಡೆಸುತ್ತಿದ್ದ ಈ ‘ಕಲ್ಲಿನ ವ್ಯಕ್ತಿ’ ಬಗ್ಗೆ ಜನರಲ್ಲಿ ವಿಪರೀತ ಭೀತಿ ಮೂಡಿತ್ತು.

ಮೇ ತಿಂಗಳಲ್ಲಿ ಓವರ್‌ಬ್ರಿಡ್ಜ್ ನಿರ್ಮಾಣ ಸ್ಥಳದಲ್ಲಿ ವಾಚ್‌ಮ್ಯಾನ್ ಒಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆತನ ಛಿದ್ರವಾದ ಮುಖದ ಮೇಲೆ ಶೂ ಒಂದನ್ನು ಇರಿಸಲಾಗಿತ್ತು. ತನ್ನಿಂದ ಹತ್ಯೆಯಾದ ಯಾವ ವ್ಯಕ್ತಿಯಿಂದಲೂ ಆತ ಕಳ್ಳತನ ಮಾಡುತ್ತಿರಲಿಲ್ಲ.

ಇದು ಸುಮ್ಮನೆ ಕೊಲ್ಲುವ ಖಯಾಲಿಯಾಗಿತ್ತು. ತನ್ನ ಎರಡನೇ ಅಥವಾ ಮೂರನೇ ಬಲಿಪಶುವಿನ ಬಳಿ ಇದ್ದ ಮೊಬೈಲ್ ಫೋನ್‌ನನ್ನು ಹಂತಕ ಕೊಂಡೊಯ್ದಿದ್ದ. ಪೊಲೀಸರು ಇದರ ಬೆನ್ನಟ್ಟಿದ್ದರು.

ಆತನ ಫೋನ್ ಲೊಕೇಷನ್ ಆಧಾರದಲ್ಲಿ ಭೋಪಾಲ್‌ನಲ್ಲಿ ಸೆರೆಹಿಡಿಯಲಾಯಿತು” ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ.

ಗುರುವಾರ ರಾತ್ರಿ, ಆತ ಮಾರ್ಬಲ್ ರಾಡ್ ಬಳಸಿ 23 ವರ್ಷದ ಸೋನು ವರ್ಮಾ ಎಂಬ ವ್ಯಕ್ತಿಯನ್ನು ಕೊಂದಿದ್ದಾನೆ. ಸೋನು ವರ್ಮಾ ಮಾರ್ಬಲ್ ಅಂಗಡಿಯಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿದ್ದ. ಇದಕ್ಕೂ ಮುನ್ನ ಆಗಸ್ಟ್ 28ರಂದು ಫ್ಯಾಕ್ಟರಿಯೊಂದರ ಕಾವಲುಗಾರ ಕಲ್ಯಾಣ್ ಲೋಧಿ ಎಂಬಾತನನ್ನು ಹತ್ಯೆ ಮಾಡಿದ್ದ.

ಆತ ತಲೆಯನ್ನು ಸುತ್ತಿಗೆಯಿಂದ ಒಡೆಯಲಾಗಿತ್ತು. ಮರು ರಾತ್ರಿಯೇ ಕಲಾ ಮತ್ತು ವಾಣಿಜ್ಯ ಕಾಲೇಜಿನ ಕಾವಲುಗಾರ, 60 ವರ್ಷದ ಶಂಭು ನಾರಾಯಣ ದುಬೆ ಎಂಬುವವರನ್ನು ಕಲ್ಲಿನಿಂದ ಜಜ್ಜಿ ಕೊಂದಿದ್ದ.

ಮರುದಿನ ಮನೆಯೊಂದರ ವಾಚ್‌ಮ್ಯಾನ್ ಮಂಗಳ್ ಅಹಿರ್ವರ್ ಎಂಬಾತನನ್ನು ಶಿವಪ್ರಸಾದ್ ಕೊಂದಿದ್ದ. ಶಿವ ಪ್ರಸಾದ್‌ ತನ್ನ ಕೃತ್ಯಗಳನ್ನು ಒಂದೇ ಕಡೆ ಎಸಗಿರಲಿಲ್ಲ.

ಭೋಪಾಲ್‌ನಿಂದ 169 ಕಿಮೀ ದೂರದಲ್ಲಿನ ಸಾಗರ್‌ನಲ್ಲಿ ಈತ ಈ ಸರಣಿ ಕೊಲೆಗಳನ್ನು ಆರಂಭಿಸಿದ್ದ. ಈ ಹತ್ಯೆಗಳು ಪಟ್ಟಣದಲ್ಲಿ ಆತಂಕ ಮೂಡಿಸಿತ್ತು. ಹೀಗಾಗಿ ಪೊಲೀಸರು ತಮ್ಮ ಗಸ್ತು ಹೆಚ್ಚಿಸಿದ್ದರು.

ನಸುಕಿನ 3.30ರ ಸುಮಾರಿಗೆ ಬಸ್ ನಿಲ್ದಾಣದ ಬಳಿ ಹಂತಕನನ್ನು ಸುತ್ತುವರಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆದರೆ ಅದಕ್ಕೂ ಕೆಲವು ಗಂಟೆಗಳ ಮುಂಚೆಯಷ್ಟೇ ಆತ ಭೋಪಾಲ್‌ನ ಮಾರ್ಬಲ್ ಅಂಗಡಿಯಲ್ಲಿ ಹತ್ಯೆ ಮಾಡಿದ್ದ.

ಕಳೆದ ಐದು ದಿನಗಳಲ್ಲಿ ನಾಲ್ವರು ಸೆಕ್ಯುರಿಟಿ ಗಾರ್ಡ್‌ಗಳನ್ನು ಹತ್ಯೆ ಮಾಡಿರುವುದನ್ನು ಆತ ಒಪ್ಪಿಕೊಂಡಿದ್ದಾನೆ. ಮೇ ತಿಂಗಳಲ್ಲಿ ನಡೆದಿದ್ದ ಕೊಲೆಯ ಕುರಿತು ತನಿಖೆ ನಡೆಸಲಾಗಿದೆ. ಆರೋಪಿ ಶಿವಪ್ರಸಾದ್, ಸಾಗರ್ ಜಿಲ್ಲೆಯ ಕೆಸ್ಲಿ ಪ್ರದೇಶದ ನಿವಾಸಿಯಾಗಿದ್ದಾನೆ.

ಈತ ‘ಕೆಜಿಎಫ್’ ಚಿತ್ರದ ರಾಕಿಭಾಯ್‌ನಿಂದ ಪ್ರಭಾವಿತನಾಗಿದ್ದ. ಮುಂದೆ ಹಣ ಸಂಗ್ರಹಿಸಿ ಗ್ಯಾಂಗ್‌ಸ್ಟರ್ ಆಗಲು ಬಯಸಿದ್ದ. ಈತನ ಮುಂದಿನ ಟಾರ್ಗೆಟ್‌ಗಳು ಪೊಲೀಸರಾಗಿದ್ದರು.

ಎಂಟನೇ ತರಗತಿಯವರೆಗೆ ಓದಿದ್ದ ಆತ, ಗೋವಾದಲ್ಲಿ ಕೆಲಸ ಮಾಡಿದ್ದ. ತಕ್ಕಮಟ್ಟಿಗೆ ಇಂಗ್ಲಿಷ್ ಕೂಡ ಮಾತನಾಡಬಲ್ಲವನಾಗಿದ್ದ. ‘ಫೇಮಸ್’ ಆಗುವುದು ಆತನ ಗುರಿಯಾಗಿತ್ತು. ಆದರೆ ನಿದ್ರೆಯಲ್ಲಿರುವ ಕಾವಲುಗಾರರನ್ನೇ ಸಾಯಿಸಿದ್ದು ಏಕೆಂದು ಇನ್ನೂ ಸ್ಪಷ್ಟವಾಗಿಲ್ಲ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button