
ಹೊನ್ನೇನಹಳ್ಳಿ ಗ್ರಾಮದ ಗ್ರಾಮ ಪಂಚಯತಿಯ ಕೆಂಗಲ್ ಗ್ರಾಮದ ಅಗಳಿ ಕಟ್ಟೆಯ ಸಣ್ಣಕೆರೆಯಲ್ಲಿ ತೇಲಿಬಂದ ಸೂಟ್‍ಕೇಸ್‍ನಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಸ್ಥಳೀಯರು ಕೊಳೆತ ವಾಸನೆ ಹಾಗೂ ಅನುಮಾನಾಸ್ಪದ ಸೂಟ್‍ಕೇಸ್‍ತೇಲುತ್ತಿರುವುನ್ನು ಗಮನಿಸಿ ದಾಬಸ್ ಪೇಟೆ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ದಾಬಸ್ ಪೇಟೆ ಪೋಲೀಸರು ಸೂಟ್‍ಕೇಸ್‍ನಲ್ಲಿ ಸುಮಾರು 30 ರಿಂದ 35 ವರ್ಷದ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದು, ್ದಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಮಹಿಳೆಯನ್ನು ಬೇರೆಡೆ ಕೊಲೆಗೈದು ತಂದು ಎಸೆದಿರುವ ಶಂಕೆಯಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನವಂಶಿಕೃಷ್ಣ, ನೆಲಮಂಗಲ ವೃತ್ತ ನಿರೀಕ್ಷಕ ರಾಜೀವ್, ದಾಬಸ್ ಪೇಟೆ ಠಾಣೆ ಆರಕ್ಷಕ ಉಪನಿರೀಕ್ಷಕ ಎಂ.ಎನ್.ಮುರಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸ್ಥಳವು ನಿರ್ಜನ ಪ್ರದೇಶವಾಗಿದ್ದು, ಸುತ್ತಲೂ ಬೆಟ್ಟಗುಟ್ಟ ಹಾಗೂ ಮರ-ಗಿಡಗಳಿಂದ ಆವರಿಸಿದ್ದು ,ಇಲ್ಲಿ ಈ ರೀತಿಯ ಕೃತ್ಯ ಬೆಳಕಿಗೆ ಬಂದಿರುವುದರಿಂದ ಈ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಿಸಲು ಒಬ್ಬಂಟಿಯಾಗಿ ಹೋಗುವ ಸ್ಥಳೀಯರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.ಪ್ರಕರಣ ದಾಖಲಿಸಿಕೊಂಡಿರುವ ಡಾಬಸ್‍ಪೇಟೆ ಪೊಲೀಸರು ಮೃತ ಮಹಿಳೆಯ ಶವವನ್ನು ತುಮಕೂರಿನ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಈ ಮಹಿಳೆ ಯಾವ ಊರಿನವರು, ಯಾರು ಈಕೆಯನ್ನು ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾರೆಂಬ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.