ಸುರಕ್ಷತೆ ರಹಿತ ಕೆರೆಗಳು ಮೃತ್ಯುಕೂಪ: ಕಾಫಿನಾಡಿನಲ್ಲಿ ಏರಿ ಮೇಲೆ ತಡೆಗೋಡೆ ಇಲ್ಲದ ಸಂಪರ್ಕ ರಸ್ತೆ

ಮಳೆಯಾಗಿ ಸುರಿದು ಹಳ್ಳವಾಗಿ ಓಡುವ ನೀರನ್ನು ಹಿಡಿದಿಡುವ ಕೆರೆಗಳು ನಿಸರ್ಗದ ಜಲ ಪಾತ್ರೆಗಳು. ಆದರೆ ಕಾಫಿನಾಡಿನಲ್ಲಿ ಈ ಕೆರೆಗಳು ಈಗ ಮೃತ್ಯುಕೂಪಗಳಾಗುವ ಆತಂಕ ಎದುರಾಗಿದೆ.
ಜಿಲ್ಲೆಯಲ್ಲಿ ನಿರಂತರವಾಗಿ ಈ ವರ್ಷ ಸುರಿದ ಮಳೆಗೆ ಮಲೆನಾಡು ಸೇರಿದಂತೆ ಬಯಲು ಭಾಗದ ಎಲ್ಲಾ ಕೆರೆಗಳು ತುಂಬಿ ತುಳುಕುತ್ತಿವೆ.ಆದರೆ, ಬಹುತೇಕ ಕೆರೆಗಳ ಇಕ್ಕೆಲಗಳಲ್ಲಿ ತಡೆಗೋಡೆಗಳು ಇಲ್ಲದ ಕಾರಣ ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಕಳೆದ ನಾಲ್ಕು ವರ್ಷದ ಹಿಂದೆ ಮಾಗಡಿ ಕೆರೆಯಲ್ಲಿ ಟೂರಿಸ್ಟ್ ಬಸ್ ಉರುಳಿ ಬಿದ್ದು, ಕೇರಳದ ವಿದ್ಯಾರ್ಥಿನಿ ಸಾವಪ್ಪಿದ್ದರು. ಇತ್ತೀಚೆಗೆ ಇದೇ ಕೆರೆ ಏರಿಯ ಮೇಲೆ ಕೆಎಸ್‌ಆರ್‌ಟಿಸಿ ಬಸ್‌ನ ಹಿಂಬದಿ ಚಕ್ರ ಕಳಚಿಕೊಂಡಿತ್ತು. ಆದರೆ ಚಾಲಕನ ಚಾಣಾಕ್ಷತನದಿಂದ ಕೆರೆಗೆ ಉರುಳಬೇಕಾಗಿದ್ದ ಬಸ್ ರಸ್ತೆ ಬದಿಯಲ್ಲೇ ನಿಂತಿತ್ತು.
ಆಕಸ್ಮಿಕವಾಗಿ ಕೆರೆಗೆ ಉರುಳಿದ್ದರೆ ಹತ್ತಾರು ಜೀವಗಳು ಬಲಿಯಾಗುತ್ತಿದ್ದವು.ಹೀಗೆ ಹಲವು ಸಣ್ಣ ಪುಟ್ಟ ಪ್ರಕರಣಗಳು ನಡೆದಿರುವ ನಡುವೆ ಈ ವರ್ಷ ಜಿಲ್ಲೆಯ ಬಹುತೇಕ ದೊಡ್ಡ ಕೆರೆಗಳು ತುಂಬಿ ತುಳುಕುತ್ತಿದ್ದು, ಮುಂಜಾಗ್ರತೆ ತೆಗೆದುಕೊಳ್ಳಬೇಕಾದ ಅಗತ್ಯತೆ ಇದೆ.
ಗ್ರಾಮೀಣ ಕೆರೆ ಏರಿಗಳ ಮೇಲೂ ಸುರಕ್ಷತೆ ಬೇಕು:ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಹಾಗೂ ಜಿಲ್ಲಾಪಂಚಾಯಿತಿ ವ್ಯಾಪ್ತಿಯಲ್ಲಿ 1890 ಕೆರೆಗಳು ಬರುತ್ತವೆ. ಬಯಲು ಭಾಗವಾದ ಮಲೆನಾಡು ಸೇರಿದಂತೆ ಕಡೂರು, ತರೀಕೆರೆ, ಚಿಕ್ಕಮಗಳೂರು ತಾಲೂಕಿನ ಬಯಲು ಭಾಗದಲ್ಲಿಯೂ ಬಹುತೇಕ ಕೆರೆಗಳು ನೀರು ತುಂಬಿಕೊಂಡಿವೆ.
ಹಲವು ಕೆರೆಗಳು ಸಂಪರ್ಕ ರಸ್ತೆಗಳಾಗಿದ್ದು, ಕೆಲವು ಕೆರೆ, ಕಟ್ಟೆಗಳ ಮೂಲಕ ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಸಹ ಹಾದು ಹೋಗಿದೆ. ಈ ಹಿನ್ನೆಲೆ ಕೆರೆಯ ಏರಿಯ ಮೇಲೆ ಸುರಕ್ಷತೆಯ ದೃಷ್ಟಿಯಿಂದ ಗಮನಹರಿಸಬೇಕಿದೆ.