ಸುಪ್ರೀಂ ಸೂಚನೆ ಆಧರಿಸಿ ಚುನಾವಣೆ

ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಹಾಗೂ ತಾಲ್ಲೂಕು ಮತ್ತು ಜಿಲ್ಲಾಪಂಚಾಯ್ತಿಗಳಿಗೆಸುಪ್ರೀಂಕೋರ್ಟ್‌ನ ನಿರ್ದೇಶನದ ಅನುಸಾರ ಚುನಾವಣೆ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಕಬಿನಿ ಮತ್ತು ಕೆಆರ್‌ಎಸ್ ಜಲಾಶಯಗಳಿಗೆ ಬಾಗಿನ ಅರ್ಪಿಸುವ ಮುನ್ನ ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ತಾಯಿ ಚಾಮುಂಡೇಶ್ವರಿಯ ವರ್ದಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬಿಬಿಎಂಪಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ಸಂಬಂಧ ರಾಜ್ಯಸರ್ಕಾರ ವಾರ್ಡ್ ವಿಂಗಡಣೆ, ಮೀಸಲಾತಿಗೆ ಸಂಬಂಧಿಸಿದಂತೆ ಈ ತಿಂಗಳ ೨೨ ರಂದು ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಲಿದೆ ಎಂದರು.
ರಾಜ್ಯಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಿರುವ ವರದಿಗೆ ನ್ಯಾಯಾಲಯ ಯಾವ ರೀತಿ ನಿರ್ದೇಶನ ನೀಡುತ್ತದೋ ಅದಕ್ಕೆ ಅನುಗುಣವಾಗಿ ಚುನಾವಣೆಗಳು ನಡೆಯಲಿವೆ.
ಚುನಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯದ ನಿರ್ದೇಶನ ಪಾಲಿಸಲಾಗುವುದು ಎಂದರು.ಡಿಕೆಶಿಗೆ ತಿರುಗೇಟುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಕಿಡಿಕಾರಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಪ ಡಿ.ಕೆ ಶಿವಕುಮಾರ್ ಹಲವು ವರ್ಷಗಳ ಕನಸಾದ ಮುಖ್ಯಮಂತ್ರಿಯಾಗಲು ಒದ್ದಾಡುತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿಯೇ ಅವರಿಗೆ ಸರಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲ.ನಾವು ದಿನ ನಿತ್ಯ ಎಲ್ಲವನ್ನೂ ನೋಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಾನೊಂದು ತೀರ, ನೀನೊಂದು ತೀರದಂತೆ ನಡೆದುಕೊಳ್ಳುತ್ತಿದ್ದಾರೆ. ಮೊದಲು ಅವರ ತಟ್ಟೆಯಲ್ಲಿ ಏನಿದೆ ನೋಡಿಕೊಳ್ಳಲಿ.
ಆಮೇಲೆ ಇನ್ನೊಬ್ಬರ ತಟ್ಟೆ ನೋಡಲಿ ಎಂದು ಕಿಡಿಕಾರಿದರು.ಜಿಎಸ್‌ಟಿ ಪಾಲುಕೇಂದ್ರ ಸರ್ಕಾರ ರಾಜ್ಯದ ಜಿಎಸ್‌ಟಿ ಪಾಲನ್ನು ಸಮರ್ಪಕವಾಗಿಯೇ ನೀಡುತ್ತಿದೆ. ಇದರಲ್ಲಿ ಯಾವುದೇ ತೊಂದರೆ ಇಲ್ಲ.
ಜಿಎಸ್‌ಟಿ ಪರಿಹಾರವನ್ನು ೨ ವರ್ಷ ವಿಸ್ತರಿಸಬೇಕು ಎಂಬ ರಾಜ್ಯಗಳ ಬೇಡಿಕೆಯನ್ನು ಜಿಎಸ್‌ಟಿ ಕಾಯ್ದೆಯಡಿ ಒಪ್ಪಲು ಆಗಲ್ಲ ಎಂಬ ಮಾತನ್ನು ಹೇಳಿದ್ದಾರೆ. ಜಿಎಸ್‌ಟಿ ಕಾಯ್ದೆಯನ್ನು ಸಂಸತ್‌ನಲ್ಲಿ ಎಲ್ಲ ಪಕ್ಷಗಳು ಸೇರಿಯೇ ಅಂಗೀಕಾರ ಮಾಡಿವೆ.
ಈ ಕಾಯ್ದೆಯ ಪ್ರಕಾರ ಜಿಎಸ್‌ಟಿ ಪರಿಹಾರ ೫ ವರ್ಷಎಂದು ನಿಗದಿ ಮಾಡಲಾಗಿದೆ. ಎಲ್ಲವೂ ಕಾಯ್ದೆಯಂತೆ ನಡೆದಿದೆ ಎಂದರು.ರಾಜ್ಯಕ್ಕೆ ಕೇಂದ್ರ ಸರ್ಕಾರ ಎಲ್ಲ ಜಿಎಸ್‌ಟಿ ಬಾಕಿಯನ್ನು ನೀಡುತ್ತಿದೆ.
ಮೊನ್ನೆ ಸುಮಾರು ೮,೮೦೦ ಕೋಟಿ ರೂ. ಕೊಟ್ಟಿದ್ದಾರೆ. ಕೋವಿಡ್‌ನ ಸಂದರ್ಭದಲ್ಲಿ ಜಿಎಸ್‌ಟಿ ಸಂಗ್ರಹವಾಗದಿದ್ದರೂ ಕೇಂದ್ರಸರ್ಕಾರ ಪರಿಹಾರ ಕೊಟ್ಟಿದೆ ಎಂದು ಅವರು ಹೇಳಿದರು.
ಇಂದು ಕಬಿನಿ ಮತ್ತು ಕೆಆರ್‌ಎಸ್‌ಗೆ ಬಾಗಿನ ಅರ್ಪಿಸುತ್ತಿದ್ದೇನೆ. ಆಷಾಢ ಮಾಸದಲ್ಲಿ ಜಲಾಶಯಗಳು ತುಂಬಿರುವುದು ಅಪರೂಪ,ಈ ಬಾರಿ ರಾಜ್ಯದೆಲ್ಲೆಡೆ ಒಳ್ಳೆ ಮಳೆಯಾಗಿದೆ.
ರೈತರು ಹೊಲ-ಗದ್ದೆಗಳಲ್ಲಿ ಅನುಕೂಲವಾಗಿದೆ ಎಂದು ಮುಖ್ಯಮಂತ್ರಿಗಳು ಸಂತಸ ವ್ಯಕ್ತಪಡಿಸಿದರು.