ಸುಪ್ರೀಂ ಕೋರ್ಟ್ ಆದೇಶದಂತೆ ಸಮಯಕ್ಕೆ ಬಿ.ಬಿ.ಎಂ.ಪಿ ಚುನಾವಣೆ ನಡೆಸುತ್ತೇವೆ ಮತ್ತು ಪಕ್ಷದ ಸಿದ್ಧತೆ ಆರಂಭಿಸಿದ್ದೇವೆ : ಸಿ.ಎಂ. ಬೊಮ್ಮಯಿ

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಈಗಿನಿಂದಲೇ ತಯಾರಿ ಮಾಡಲಿದ್ದೇವೆ. ಪಕ್ಷದ ವತಿಯಿಂದ ಬೂತ್ ಕಮಿಟಿ ಮತ್ತು ವಾರ್ಡ್ ಸಮಿತಿಗಳನ್ನು ಚುರುಕುಗೊಳಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇವತ್ತು ನಮ್ಮ ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಬಿಬಿಎಂಪಿ ವ್ಯಾಪ್ತಿಗೆ ಸಂಬಂಧಿಸಿದ ಜಿಲ್ಲಾ ಅಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳು, ನನ್ನ ಸಚಿವಸಂಪುಟದ ಸಹೋದ್ಯೋಗಿಗಳ ಮತ್ತು ಶಾಸಕ ಮಿತ್ರರು ಇದ್ದ ಸಭೆಯಲ್ಲಿ ಬಿಬಿಎಂಪಿ ಚುನಾವಣೆ ಬಗ್ಗೆ ಮಾತನಾಡಿದ್ದೇವೆ ಎಂದು ವಿವರಿಸಿದರು.

ಈಗಾಗಲೇ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಬೇಕು. ಮಳೆಗಾಲವನ್ನು ಗಮನದಲ್ಲಿ ಇಟ್ಟು ಆ ಕಾಮಗಾರಿಗಳನ್ನು ಬೇಗನೆ ಮುಗಿಸಬೇಕು ಎಂದು ನಿರ್ಧರಿಸಲಾಗಿದೆ. ಪಕ್ಷದ “ವಿಷನ್ ಡಾಕ್ಯುಮೆಂಟ್”ಅನ್ನು ಸಿದ್ಧಪಡಿಸಲು ತಜ್ಞರ ಸಮಿತಿಯನ್ನು ನೇಮಿಸಲು ತೀರ್ಮಾನಿಸಲಾಗಿದೆ. ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಬೇಕು. ಸಂಘಟನೆ ಮತ್ತು ಅಭಿವೃದ್ಧಿ ವಿಚಾರದಲ್ಲಿ ನಿರಂತರವಾಗಿ ಚರ್ಚೆ ಮಾಡುತ್ತಿರಬೇಕು. ಜನಾಭಿಪ್ರಾಯ ಪಡೆದು ಪ್ರಣಾಳಿಕೆಯಲ್ಲಿ ಸೇರಿಸಿ ವಿಷನ್ ಡಾಕ್ಯುಮೆಂಟ್ ತಯಾರು ಮಾಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ನಮ್ಮ ಶಾಸಕರು, ಸಚಿವರಿಂದ ಹಲವಾರು ಸಲಹೆ-ಸೂಚನೆಗಳು ಬಂದಿವೆ. ಅವೆಲ್ಲವನ್ನೂ ಗಮನಿಸಿ ಚುನಾವಣಾ ಸಿದ್ಧತೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದರು. ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‍ನ ಆದೇಶವನ್ನು ಪಾಲಿಸುತ್ತೇವೆ. ಬೆಂಗಳೂರಿಗೆ ಮೂಲಸೌಕರ್ಯ ಒದಗಿಸುವ ಕಾರ್ಯಕ್ಕೆ ಒತ್ತು ಕೊಡಲಾಗುವುದು.
ಮಳೆಯಿಂದ ಕೆಲವು ಹಾನಿ ಆಗಿದ್ದು, ಆ ಕೆಲಸವನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸಬ್ ಅರ್ಬನ್ ಮತ್ತು ಮೆಟ್ರೋ ರೈಲಿನ ಎರಡನೇ ಹಂತದ ಕಾಮಗಾರಿಯನ್ನು ನಿಗದಿತ ಅವಧಿಗಿಂತ ಒಂದು ವರ್ಷ ಮೊದಲೇ ಪೂರ್ಣಗೊಳಿಸಲು ಪ್ರಯತ್ನ ನಡೆದಿದೆ. 75 ಉದ್ಯಾನಗಳು ಮತ್ತು ಕೆರೆಗಳ ಅಭಿವೃದ್ಧಿಗೆ ಈಗಾಗಲೇ ಆದೇಶ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.