ರಾಜಕೀಯ

ಸಿ.ಎಂ ಗದ್ದುಗೆಗೆ ಗುದ್ದಾಟ ಖರ್ಗೆ ಚಾಟಿ

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಪೈಪೋಟಿಯೇ ನಡೆದು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವಾಗಲೇ ವಿಧಾನಸಭಾ ಚುನಾವಣೆ ಮುನ್ನವೇ ನಾನೇ ಮುಖ್ಯಮಂತ್ರಿ ಎಂದೆಲ್ಲಾ ಹೇಳಿಕೊಂಡು ಓಡಾಡುವುದು ಸರಿಯಲ್ಲ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ನಾಯಕರುಗಳಿಗೆ ನಯವಾಗಿಯೇ ಚಾಟಿ ಬೀಸಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಮೈಸೂರಿನಲ್ಲೋ, ಬೆಂಗಳೂರಿನಲ್ಲೋ ಅಥವಾ ಕಲ್ಬುರ್ಗಿಯಲ್ಲೋ ತೀರ್ಮಾನವಾಗಲ್ಲ.

ಪಕ್ಷದ ಹೈಕಮಾಂಡ್ ಅದನ್ನು ತೀರ್ಮಾನ ಮಾಡುತ್ತದೆ ಎಂದರು.ಆವತ್ತಿನ ರಾಜಕೀಯ ಪರಿಸ್ಥಿತಿಯ ಆಧಾರದ ಮೇಲೆ ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾನೇ ಮುಖ್ಯಮಂತ್ರಿ ಎಂದು ಈಗ ಹೇಳಿಕೊಂಡು ಹೋಗುತ್ತಿರುವವರು ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್ ಯಾವಾಗಲೂ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆಗೆ ಹೋಗುತ್ತದೆ. ಪ್ರತಿ ಬಾರಿಯೂ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ನಡೆದಿದೆ. ಈ ಬಾರಿಯೂ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎಂದರು.ಮೊದಲು ಪಕ್ಷವನ್ನು ಅಧಿಕಾರಕ್ಕೆ ತರಬೇಕು.

ಅದೇ ನಮ್ಮ ಪ್ರಥಮ ಆದ್ಯತೆ. ನಂತರ ಉಳಿದಿದ್ದು ಎಂದು ಖರ್ಗೆ ಹೇಳುವ ಮೂಲಕ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಕಾಂಗ್ರೆಸ್‌ನಲ್ಲಿ ನಡೆದಿರುವ ಚರ್ಚೆಗಳಿಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ವೈಯುಕ್ತಿಕ ನಿರ್ಧಾರರಾಜಕಾರಣದಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ನಿವೃತ್ತಿಯಾಗುವುದು ಅವರ ವೈಯುಕ್ತಿಕ ನಿರ್ಧಾರ. ಆ ಬಗ್ಗೆ ನಾನು ಮಾತನಾಡುವುದಿಲ್ಲ.

ವೈಯುಕ್ತಿಕವಾಗಿ ತೀರ್ಮಾನ ತೆಗೆದುಕೊಳ್ಳುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇರುತ್ತದೆ. ಯಾರು ಇರಲಿ, ಬಿಡಲಿ ದೇಶ ಇದ್ದೇ ಇರುತ್ತದೆ. ನಾನಿಲ್ಲ ಎಂದರೆ ಇನ್ನೊಬ್ಬರು ಬರುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸೋನಿಯಾಗಾಂಧಿಯವರನ್ನು ವಿಚಾರಣೆಗೆ ಒಳಪಡಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ದೇಶಕ್ಕಾಗಿ ಮನೆಯನ್ನೆ ಕಳೆದುಕೊಂಡವರು ೧ ಕೋಟಿ ರೂ. ಅವ್ಯವಹಾರ ಮಾಡುತ್ತಾರೇನ್ರೀ.. ಎಂದು ಗುಡುಗಿದರು.ಗಾಂಧಿ ಕುಟುಂಬದವರನ್ನು ಇಡಿ ವಿಚಾರಣೆಗೆ ಒಳಪಡಿಸಿದ ತಕ್ಷಣ ಕಾಂಗ್ರೆಸ್ಸಿಗರು ಮಾನಸಿಕವಾಗಿ ಕುಗ್ಗುವುದಿಲ್ಲ.

ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ತ್ಯಾಗ ಬಲಿದಾನ ಮಾಡಿರುವ ಕಾಂಗ್ರೆಸ್‌ನ್ನು ಮಾನಸಿಕವಾಗಿ ಕುಗ್ಗಿಸಲು ಸಾಧ್ಯವಿಲ್ಲ ಎಂದರು.ಬಿಜೆಪಿ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇಂತಹ ಗಿಮಿಕ್ ಮಾಡುತ್ತಿದೆ.

ಸತ್ಯಾಗ್ರಹ ಮಾಡವರು, ತ್ಯಾಗ ಬಲಿದಾನ ಗೊತ್ತಿಲ್ಲದ ಬಿಜೆಪಿಯವರಿಗೆ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಖರ್ಗೆ ಹೇಳಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button