
ಬಿಟ್ಕಾಯಿನ್ ಮೂಲಕ ಹಣ ಪಾವತಿಸಿ ಡಾರ್ಕ್ವೆಬ್ ಸೈಟ್ನಲ್ಲಿ ಮಾದಕವಸ್ತುಗಳನ್ನು ಬುಕ್ ಮಾಡಿ ನಗರಕ್ಕೆ ತರಿಸಿಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ, ಐಟಿ-ಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದ ಕೇರಳದ ಡ್ರಗ್ ಪೆಡ್ಲರ್ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಡ್ರಗ್ ಪೆಡ್ಲಿಂಗ್ನಲ್ಲಿ ತೊಡಗಿದ್ದ ಕೇರಳದ ಮೊಹಮ್ಮದ್ ರನ್ನಾರ್ (27) ಎಂಬಾತನನ್ನು ಬಲೆಗೆ ಬೀಳಿಸಿಕೊಂಡಿದ್ದಾರೆ.
ಆರೋಪಿಯಿಂದ 6.5 ಲಕ್ಷ ರೂ. ಬೆಲೆ ಬಾಳುವ ನಿಷೇತ ಮಾದಕ ವಸ್ತುಗಳಾದ 49.30 ಗ್ರಾಂ ತೂಕದ 90 ಎಕ್ಸಾಟಸಿ ಪಿಲ್ಸ್, 40 ಗ್ರಾಂ ತೂಕದ ಚರಸ್, 5 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಮತ್ತು ಕೃತ್ಯಕ್ಕೆ ಬಳಸಿದ್ದ ಲ್ಯಾಪ್ಟಾಪ್, ಮೊಬೈಲ್ ಹಾಗೂ ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈತ ಡಾರ್ಕ್ವೆಬ್ಸೈಟ್ ನಲ್ಲಿ ವಿದೇಶದಿಂದ ನಿಷೇಧಿತ ಈ ಮಾದಕ ವಸ್ತುಗಳನ್ನು ಬಿಟ್ಕಾಯಿನ್ ಮೂಲಕ ಹಣ ಪಾವತಿಸಿ ಬುಕ್ ಮಾಡಿ ನಗರಕ್ಕೆ ತರಿಸಿಕೊಂಡಿದ್ದಾನೆ. ಕಾಲೇಜು ವಿದ್ಯಾರ್ಥಿಗಳಿಗೆ, ಐಟಿ-ಬಿಟಿ ಉದ್ಯೋಗಿಗಳಿಗೆ ಮತ್ತು ಪರಿಚಯಸ್ಥ ಗಿರಾಕಿಗಳಿಗೆ ಒಂದು ಗ್ರಾಂ ಎಂಡಿಎಂಎ ಕ್ರಿಸ್ಟಿಲ್ಗೆ 8 ಸಾವಿರದಿಂದ 10 ಸಾವಿರ ರೂ.ಗಳಂತೆ, ಚರಸನ್ನು ಒಂದು ಗ್ರಾಂಗೆ ಒಂದು ಸಾವಿರದಿಂದ 1500ರೂ.ಗೆ ಮತ್ತು ಒಂದು ಎಕ್ಸ್ಟಸಿ ಪಿಲ್ಸ್ಗೆ ಆರು ಸಾವಿರದಿಂದ ಏಳು ಸಾವಿರ ರೂ.ಗಳಂತೆ ಮಾರಾಟ ಮಾಡಿಕೊಂಡಿದ್ದುದು ವಿಚಾರಣೆಯಿಂದ ತಿಳಿದು ಬಂದಿರುತ್ತದೆ.
ಆರೋಪಿ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ.ಈ ಕಾರ್ಯಾಚರಣೆಯನ್ನು ಸಿಸಿಬಿ ಘಟಕದ ಮಾದಕ ದ್ರವ್ಯ ದಳದ ಅಕಾರಿ ಮತ್ತು ಸಿಬ್ಬಂದಿ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತದೆ.