
ಸಿಲಿಕಾನ್ ಸಿಟಿಯಲ್ಲಿ ಅತಿ ಹೆಚ್ಚು ಐಟಿ-ಬಿಟಿ ಸಂಸ್ಥೆಗಳಿರುವ ಮಹದೇವಪುರ ಕೊರೊನಾ ಹರಡುವ ಹಾಟ್‍ಸ್ಪಾಟ್ ಆಗಿ ಪರಿವರ್ತನೆಗೊಳ್ಳುತ್ತಿದೆ. ಮೊದಲ ಹಾಗೂ ಎರಡನೇ ಅಲೆ ಸಂದರ್ಭದಲ್ಲೂ ಮಹದೇವಪುರದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿದ್ದರು.
ಇದೀಗ ಅದೇ ಪ್ರದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ನಾಲ್ಕನೆ ಅಲೆ ಆರಂಭಕ್ಕೂ ಮಹದೇವಪುರವೇ ಮುನ್ನುಡಿ ಬರೆಯುವ ಲಕ್ಷಣಗಳು ಕಂಡು ಬರುತ್ತಿವೆ.
ಕಳೆದ ಒಂದು ವಾರದಿಂದ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ.ಏರಿಕೆಯಾದ ಕೊರೊನಾ ಕೇಸ್‍ಗಳಲ್ಲಿ ಅತಿ ಹೆಚ್ಚು ಸೋಂಕಿತರು ಕಂಡು ಬಂದಿರುವುದು ಮಹದೇವಪುರದಲ್ಲೇ. ಇಲ್ಲಿ ಪ್ರತಿನಿತ್ಯ 300 ರಿಂದ 400 ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ.
ನಗರದಲ್ಲಿ ಪ್ರತಿನಿತ್ಯ ಪತ್ತೆಯಾಗುತ್ತಿರುವ ಕೊರೊನಾ ಸೋಂಕಿತರ ಪೈಕಿ ಅರ್ಧದಷ್ಟು ಮಂದಿ ಮಹದೇವಪುರದ ನಿವಾಸಿಗಳು ಎನ್ನುವುದು ಆತಂಕಕ್ಕೆ ಕಾರಣವಾಗಿದೆ.
ದಿನೇ ದಿನೇ ಕೊರೊನಾ ಸೋಂಕು ಏರಿಕೆಯಾಗುತ್ತಿರುವುದರಿಂದ ನಾಲ್ಕನೆ ಅಲೆ ಆರಂಭವಾಗುವ ಭೀತಿ ಎದುರಾಗಿರುವ ಸಂದರ್ಭದಲ್ಲೇ ಮಹದೇವಪುರದಲ್ಲಿ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿರುವುದು ಆರೋಗ್ಯ ಇಲಾಖೆ ಅಧಿಕಾರಿಗಳ ತಲೆ ಬಿಸಿ ಮಾಡಿದೆ.
ಮಹದೇವಪುರ ಸುತ್ತಮುತ್ತ ನೂರಾರು ಐಟಿ ಬಿಟಿ ಸಂಸ್ಥೆಗಳಿದ್ದು, ಕೊರೊನಾ ಸಂದರ್ಭದಲ್ಲಿ ಐಟಿ ಬಿಟಿ ಸಿಬ್ಬಂದಿಗಳು ವರ್ಕ್ ಫ್ರಂ ಹೋಮ್ ಕೆಲಸ ಮಾಡುತ್ತಿದ್ದರು.
ಆದರೆ, ಕೆಲ ದಿನಗಳಿಂದ ಟೆಕ್ಕಿಗಳು ಮನೆ ಬಿಟ್ಟು ಕಚೇರಿಗಳಿಗೆ ತೆರಳಿ ಕೆಲಸ ಮಾಡುತ್ತಿರುವುದರಿಂದ ಮಹದೇವಪುರದಲ್ಲಿ ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣವಾಯ್ತ ಎಂಬ ಅನುಮಾನ ಕಾಡುತ್ತಿದೆ.
ಕೆಲಸಕ್ಕೆ ತೆರಳುತ್ತಿರುವ ಟೆಕ್ಕಿಗಳು ಸ್ವಯಂಪ್ರೇರಿತರಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವುದರಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ ಎನ್ನಲಾಗಿದೆ. ಮಹದೇವಪುರಕ್ಕೆ ಪ್ರತಿನಿತ್ಯ ಸಾವಿರಾರು ವಿದೇಶಿಗರು ಬಂದು ಹೋಗುತ್ತಾರೆ.
ಇದರಿಂದಾಗಿಯೇ ಈ ವಲಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಮತ್ತೊಂದು ಕಾರಣವಾಗಿದೆ.ಈ ಪ್ರದೇಶದಲ್ಲಿ ಕೇವಲ ಟೆಕ್ಕಿಗಳಿಗೆ ಮಾತ್ರವಲ್ಲ. ಶಾಲೆಗಳಲ್ಲೂ ಕೊರೊನಾ ಸೋಂಕು ಉಲ್ಬಣಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಮಹದೇವಪುರದಲ್ಲಿ ಕ್ಲಸ್ಟರ್ ಮಾದರಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಅಕಾರಿಗಳು ಸೋಂಕು ಹತೋಟಿಗೆ ತರಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ಮಹದೇವಪುರ ವಲಯದಲ್ಲಿರುವ ಐಟಿ-ಬಿಟಿ ಸಂಸ್ಥೆಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಅಧಿಕಾರಿಗಳು ಟೆಕ್ಕಿಗಳನ್ನು ಕೊರೊನಾ ತಪಾಸಣೆಗೊಳಪಡಿಸಿ ಸೋಂಕು ಪತ್ತೆಯಾದವರಿಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ.