ರಾಜ್ಯ

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಶುರುವಾಯ್ತು ಜೆಸಿಬಿ ಸದ್ದು: ಮಹದೇವಪುರ, ಕೆ.ಆರ್‌.ಪುರದಲ್ಲಿ ಒತ್ತುವರಿ ತೆರವು

ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವಿಗೆ ಕೆಲ ದಿನ ಬಿಡುವು ಕೊಟ್ಟಿದ್ದ ಬಿಬಿಎಂಪಿಯು, ಸೋಮವಾರದಿಂದ ಮತ್ತೆ ಕಾರ್ಯಾಚರಣೆ ಆರಂಭಿಸಿದೆ. ಈ ಮೊದಲಿನಂತೆ ಕಾಂಪೌಂಡ್‌, ಶೆಡ್‌ಗಳನ್ನಷ್ಟೇ ಧ್ವಂಸಗೊಳಿಸಲಾಯಿತು.

ದೊಡ್ಡ ಕಟ್ಟಡಗಳ ತೆರವು ಆಶ್ವಾಸನೆಯಾಗಿಯೇ ಉಳಿಯಿತು.ಮಹದೇವಪುರ ವಲಯ ವ್ಯಾಪ್ತಿಯ ಆರ್‌.ನಾರಾಯಣಪುರ, ಶೀಲವಂತನಕೆರೆ, ಕಸವನಹಳ್ಳಿ ಹಾಗೂ ಕೆ.ಆರ್‌.ಪುರ ವಿಭಾಗದ ಬಸವನಪುರ ವಾರ್ಡ್‌ನ ಸಣ್ಣತಮ್ಮನಹಳ್ಳಿ, ದೇವಸಂದ್ರ ಹಳ್ಳಿ ವ್ಯಾಪ್ತಿಯಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು.

ಕೆಲವೆಡೆ ತೆರವು ಕಾರ್ಯಕ್ಕೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೆ, ಜನರ ಪ್ರತಿಭಟನೆ, ಪ್ರತಿರೋಧ ಲೆಕ್ಕಿಸದೆ ಪೊಲೀಸರು ಹಾಗೂ ಮಾರ್ಷಲ್‌ಗಳ ಭದ್ರತೆಯಲ್ಲಿ ತೆರವು ಕಾರ್ಯ ಮುಂದುವರಿಸಲಾಯಿತು.ಮಹದೇವಪುರದ ಆರ್‌.

ನಾರಾಯಣಪುರ ಹಾಗೂ ವೈಟ್‌ಫೀಲ್ಡ್‌ನ ಶೀಲವಂತನಕೆರೆ ಬಳಿ 10 ಮೀಟರ್‌ ಉದ್ದ ಮತ್ತು 4 ಮೀಟರ್‌ ಅಗಲದ ರಾಜಕಾಲುವೆ ಮೇಲೆ ಹಾಕಲಾಗಿದ್ದ ಸ್ಪ್ಯಾಬ್‌ಗಳನ್ನು ತೆರವುಗೊಳಿಸಲಾಯಿತು. ಹಾಗೆಯೇ, 4 ಮೀಟರ್‌ ಉದ್ದದ ಕಾಂಪೌಂಡ್‌ ಗೋಡೆ ಮತ್ತು 4 ಶೆಡ್‌ಗಳನ್ನು ಧ್ವಂಸಗೊಳಿಸಲಾಯಿತು.

ಕಸವನಹಳ್ಳಿಯ ವಲ್ಲಿಯಮ್ಮ ಲೇಔಟ್‌ನಲ್ಲಿ 20 ಮೀಟರ್‌ ಉದ್ದ, 3 ಮೀಟರ್‌ ಅಗಲದ ರಾಜಕಾಲುವೆ ಜಾಗವನ್ನು ಅತಿಕ್ರಮಿಸಿ ನಿರ್ಮಿಸಿದ್ದ ಮೂರು ಶೆಡ್‌ಗಳನ್ನು ಜೆಸಿಬಿ ಯಂತ್ರಗಳು ನೆಲಸಮ ಮಾಡಿದವು.

ಕೆ.ಆರ್‌.ಪುರ ವಿಭಾಗದ ಬಸವನಪುರ ವಾರ್ಡ್‌ನ ಸಣ್ಣತಮ್ಮನಹಳ್ಳಿ ಮತ್ತು ದೇವಸಂದ್ರ ಹಳ್ಳಿ ವ್ಯಾಪ್ತಿಯಲ್ಲಿ ಅಪಾರ್ಟ್‌ಮೆಂಟ್‌ವೊಂದರ 100 ಮೀಟರ್‌ನಷ್ಟು ಉದ್ದದ ಕಾಂಪೌಂಡ್‌ ಗೋಡೆ, 2 ಮನೆಗಳ 10 ಮೀಟರ್‌ ಉದ್ದದ ಕಾಂಪೌಂಡ್‌ ಹಾಗೂ ಒಂದು ಶೆಡ್‌ ಅನ್ನು ತೆರವುಗೊಳಿಸಲಾಗಿದೆ.

ಸೋಮವಾರದಂದು ಕಾಂಪೌಂಡ್, ಖಾಲಿ ಜಾಗ, ಶೆಡ್ ಮಾತ್ರ ತೆರವು ಮಾಡಿದ್ದೇವೆ. ಹಲವು ದೊಡ್ಡ ಕಟ್ಟಡ ತೆರವಿಗೆ ಕೋರ್ಟ್ ತಡೆಯಾಜ್ಞೆ ಇದೆ. ಇಂತಹ ಪ್ರಕರಣಗಳಲ್ಲಿ ತಹಸೀಲ್ದಾರ್ ರಿಂದ ನೋಟಿಸ್ ರವಾನೆಯಾಗಿ, ಮರು ಸರ್ವೆ ನಡೆಯಬೇಕಿದೆ.

ತಹಸೀಲ್ದಾರ್ ಆದೇಶ ಕೊಟ್ಟರೆ ಮಾತ್ರ ದೊಡ್ಡ ಕಟ್ಟಡ ತೆರವು ಮಾಡುತ್ತೇವೆ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಸವರಾಜ ಕಬಾಡೆ ಹೇಳಿದ್ರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button