ಸಿಮ್‍ಕಾರ್ಡ್ ಕದ್ದು ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದ ವಂಚಕ ಅಂದರ್

ಸಾರ್ವಜನಿಕರ ಸಿಮ್ ಕದ್ದು ಅವರ ಬ್ಯಾಂಕ್ ಖಾತೆಯಿಂದ ತನ್ನ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡು ವಂಚಿಸುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮಂಡ್ಯ ಜಿಲ್ಲೆ ದುದ್ದ ಹೋಬಳಿಯ ಗುನ್ನಾನಾಯಕನಹಳ್ಳಿಯ ನಿವಾಸಿ ಪ್ರಕಾಶ್(31) ಬಂಧಿತ ಆರೋಪಿ.
ಎಸ್ ಬಿಐ ಬ್ಯಾಂಕ್ ಖಾತೆಯಿಂದ ಮೇ 8ರಿಂದ 14 ರವರೆಗೆ ಅನಕೃತವಾಗಿ 3.4 ಲಕ್ಷ ಹಣ ಡ್ರಾ ಆಗಿರುವ ಬಗ್ಗೆ ಈಶಾನ್ಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಅವರ ಬ್ಯಾಂಕ್ ಖಾತೆಯಿಂದ ಹಣ ಹೇಗೆ ಕಾಣೆಯಾಗಿದೆ ಎಂಬುದು ಗೊತ್ತಾಗಿಲ್ಲ.
ಯಾವುದೇ ಓಟಿಪಿ ಸಹ ನೀಡಿರುವುದಿಲ್ಲ. ಅಲ್ಲದೆ ಯಾವುದೇ ಆಪ್ ಇನ್ಸ್ಟಾಲ್ ಸಹ ಮಾಡಿರುವುದಿಲ್ಲ. ಯಾವುದೇ ಯುಪಿಐ ಅಥವಾ ನೆಟ್‍ಬ್ಯಾಂಕಿಂಗ್ ಸೇವೆಗಳು ಸಹ ಪಡೆದಿರಲಿಲ್ಲ.ಎಸ್‍ಬಿಐ ಬ್ಯಾಂಕ್ ಖಾತೆಗೆ ಅವರ ಎರ್‍ಟೆಲ್ ಮೊಬೈಲ್ ಸಿಮ್ ಲಿಂಕ್ ಆಗಿದ್ದು, ಆದರೆ ಈ ಮೊಬೈಲ್ ಸಿಮ್ ಮೇ 8ರಂದು ಬ್ಲಾಕ್ ಆಗಿರುತ್ತದೆ.
ಮೇ 14ರಂದು ಸಿಮ್ ಕಾರ್ಡ್ ಆಕ್ಟಿವೇಷನ್ ಮಾಡಿದ ನಂತರ ಇವರಿಗೆ ಬ್ಯಾಂಕ್‍ನಿಂದ ಮೆಸೇಜ್ ಬಂದಾಗ ಹಣ ಕಳ್ಳತನ ಆಗಿರುವುದು ತಿಳಿದುಬಂದಿದೆ.ಈ ಪ್ರಕರಣ ತನಿಖೆ ಕೈಗೊಂಡ ಪೊಲೀಸರು ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿ ಪತ್ತೆ ಹಚ್ಚಿ ಬಂಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಆರೋಪಿಯು ಪಿರ್ಯಾದುದಾರರ ಮೊಬೈಲ್ ಫೋನ್ ಪಡೆದು ಕ್ಷಣ ಮಾತ್ರದಲ್ಲಿ ಅವರ ಸಿಮ್ ಕಾರ್ಡ್‍ನ್ನು ಕದ್ದು, ಅದೇ ಸ್ಥಳದಲ್ಲಿ ಬೇರೊಂದು ಸಿಮ್ ಇಟ್ಟು ತದ ನಂತರ ಕಳ್ಳತನ ಮಾಡಿದ ಸಿಮ್ ಕಾರ್ಡ್ ಬಳಸಿಕೊಂಡು ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವುದು ತಿಳಿದು ಬಂದಿದೆ.
ಮೊಬೈಲ್ ಸಿಮ್ ಕಾರ್ಡ್ ಬ್ಲಾಕ್ ಆಗಿದೆ ಎಂಬ ತಪ್ಪು ಕಲ್ಪನೆಯಿಂದ ಪಿರ್ಯಾದುದಾರರು ಅದನ್ನು ಆಕ್ಟಿವೇಷನ್ ಮಾಡಲು ತಡ ಮಾಡಿದ್ದು, ಈ ಸಮಯವನ್ನು ಬಳಸಿಕೊಂಡು ಆರೋಪಿಯು 3.45 ಲಕ್ಷ ಹಣವನ್ನು ಲಪಟಾಯಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಪೊಲೀಸರು ಆರೋಪಿಯ ಬ್ಯಾಂಕ್ ಖಾತೆಯಲ್ಲಿದ್ದ 1.3 ಲಕ್ಷ ಹಣವನ್ನು ಫ್ರೀಜ್ ಮಾಡಿಸಿದ್ದಾರೆ. ಹಾಗೂ ಮೋಸದಿಂದ ಪಡೆದ ಹಣದಿಂದ ಖರೀದಿಸಿದ್ದ ಡಿಯೋ ಬೈಕ್, ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಮೊಬೈಲ್ ಫೋನ್‍ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈಶಾನ್ಯ ವಿಭಾಗದ ಉಪಪೊಲೀಸ್ ಆಯುಕ್ತ ಡಾ. ಅನೂಪ್ ಎ. ಶೆಟ್ಟಿ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಸಂತೋಷ್ ರಾಮ್, ಪಿಎಸ್‍ಐ ರಘು ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡು ವಂಚಕನನ್ನು ಬಂಸುವಲ್ಲಿ ಯಶಸ್ವಿಯಾಗಿದ್ದಾರೆ.