ಸಿದ್ಧಾಂತಗಳ ಬಿಟ್ಟು ವಿದ್ಯಾರ್ಥಿಗಳಿಗೆ ಸತ್ಯವನ್ನು ಕಲಿಸಿ: ಎಸ್.ಎಲ್.ಭೈರಪ್ಪ
ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಸಾಹಿತಿಗಳ ವಲಯದಿಂದ ನಡೆಯುತ್ತಿರುವ ಪಠ್ಯವಾಪಸಿ ಚಳವಳಿ ಕುರಿತು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತ್ಯವನ್ನು ಹುಡುಕಿ ಅದನ್ನು ಪಠ್ಯಕ್ರಮದಲ್ಲಿ ಅಳವಡಿಸಿ ಮಕ್ಕಳಿಗೆ ಕಲಿಸಬೇಕು. ಸಿದ್ಧಾಂತಗಳನ್ನು ಕಲಿಸಬಾರದು. ಈ ನಿಟ್ಟಿನಲ್ಲಿ ಸರ್ಕಾರ ಪಠ್ಯಕ್ರಮ ಬದಲಾವಣೆಗೆ ಮುಂದಾದರೆ ಕೆಲವರು ನಾನಾ ರೀತಿಯಲ್ಲಿ ಗಲಾಟೆ ಮಾಡುತ್ತಿದ್ದಾರೆ. ನಮ್ಮ ದೇಶದಲ್ಲಿ ಹೀಗೇಕೆ ಆಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಪ್ರಧಾನಿ ಇಂದಿರಾಗಾಂಧಿ ಅಧಿಕಾರಾವಧಿಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯೊಂದಿಗೆ ತಮ್ಮ ಅನುಭವವನ್ನು ಸ್ಮರಿಸಿದ ಅವರು, ಎನ್‌ಸಿಇಆರ್‌ಟಿ ಸಂಬಂಧಿಸಿದ ಸಂಸ್ಥೆಯಲ್ಲಿ ನಾನು ಕೆಲಸ ಮಾಡುತ್ತಿದ್ದೆ. ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಪಠ್ಯಕ್ರಮ ಬದಲಾವಣೆ, ರಾಷ್ಟ್ರೀಯ ಐಕ್ಯತೆ ತರಲು ಮುಂದಾದರು. ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದ ಪಾರ್ಥಸಾರಥಿ ಅವರನ್ನು ಅಧ್ಯಕ್ಷರು ಹಾಗೂ ನನ್ನನ್ನೂ ಸೇರಿ ಐವರು ಸದಸ್ಯರ ಸಮಿತಿ ರಚಿಸಿದ್ದರು. ದೇಶದ ಐಕ್ಯತೆಗಾಗಿ ಪಠ್ಯಕ್ರಮದಲ್ಲಿನ ಕಲ್ಮಶವನ್ನು ಸ್ವಚ್ಛಗೊಳಿಸಬೇಕಿದೆ ಎಂದು ಪಾರ್ಥಸಾರಧಿ ಹೇಳಿದ್ದರು.
ಸ್ವಚ್ಛ ಮಾಡುವುದು ಅಂದರೇನರ್ಥ ಎಂದು ನಾನು ಅವರನ್ನು ಕೇಳಿದೆ. ಈ ವೇಳೆ ಆವರು ಔರಂಗಜೇಬ್ ದೇಗುಲ ಕೆಡವಿದ, ಕಾಶಿಯಲ್ಲಿ ಮಸೀದಿ ಕಟ್ಟಿದ ಎಂದೆಲ್ಲಾ ಪಠ್ಯದಲ್ಲಿದೆ. ಅವನ್ನೆಲ್ಲವನ್ನು ಬಿತ್ತುವುದು ಬೇಕಾ? ಎಂದಿದ್ದರು. ಆ ಪಠ್ಯದಲ್ಲಿರುವುದೆಲ್ಲವೂ ನಿಜ. ಮಸೀದಿಯೊಂದರ ಬಳಿ ಕಲ್ಲಿನ ಬಸವಣ್ಣ ಮೂರ್ತಿ ಇದೆ. ಅದು ಮಸೀದಿ ನೋಡುತ್ತಾ ಕುಳಿತಿದೆ ಎಂದರೆ, ಅಲ್ಲಿ ದೇವಸ್ಥಾನವಿತ್ತು ಎನ್ನುವುದುನ್ನು ತೋರಿಸುತ್ತದೆ ಎಂದೆ. ಇದಕ್ಕೆ ಅವರು ಉತ್ತರ ನೀಡಲಾಗಲಿಲ್ಲ. ಇದಾದ 15 ದಿನಗಳಲ್ಲಿ ಸಮಿತಿಯಿಂದ ನನ್ನನ್ನು ತೆಗೆದು ಕಮಿಟೆಡ್ ಕಮ್ಯುನಿಸ್ಟ್ ಒಬ್ಬರನ್ನು ಹಾಕಿದ್ದರು. ಬಳಿಕ ಹಲವು ಪಠ್ಯ ಪರಿಷ್ಕರಿಸಿ ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ಜಾರಿಗೊಳಿಸಲಾಯಿತು.
ಬಳಿಕ ಮಹಾಬಲೇಶ್ವರ ಗಢ ಜಾಗದ ಬಗ್ಗೆ ಉಲ್ಲೇಖಿಸಿದ ಅವರು, ಮಹಾಬಲೇಶ್ವರದಲ್ಲಿ ಇತಿಹಾಸ ಮರೆ ಮಾಚಲಾಗಿದೆ. ಶಿವಾಜಿಯನ್ನು ಕೊಲ್ಲಲು ಬಂದಿದ್ದ ಅಫ್ಜಲ್‌ಖಾನ್ ನನ್ನು ನಾಯಕನನ್ನಾಗಿ ಮಾಡಲಾಗಿದೆ. ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಕೊಡಗಿನವರು. ಟಿಪ್ಪು ಕೊಡಗು ಜಿಲ್ಲೆಯಲ್ಲಿ ಏನೆಲ್ಲ ಮಾಡಿದ ಅನ್ನೋದು ಕಾರ್ಯಪ್ಪಗೆ ಗೊತ್ತು. ಅದನ್ನು ಭಾಷಣದಲ್ಲಿ ಪ್ರಸ್ತಾಪ ಮಾಡಿದರು. ಇದರಿಂದ ಸಿಟ್ಟಾದ ಮಾಜಿ ನಿರ್ದೇಶಕರು, ಸಿಎಂಗೆ ಪತ್ರ ಬರೆದರು, ಚಳವಳಿ ಶುರು ಮಾಡಿದರು. ಸ್ವಲ್ಪದಿನಗಳ ನಂತರ ಎಲ್ಲರೂ ಸುಮ್ಮನಾದರು ಎಂದು ಅವರು ಹೇಳಿದರು.
ಶಿಕ್ಷಣ ಸಚಿವ ನಾಗೇಶ್ ಮನೆ ಮೇಲೆ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಪೊಲೀಸ್ ಇಲ್ಲದಿದ್ದರೆ ನಾಗೇಶ್ ಮನೆ ಸುಟ್ಟು ಹೋಗುತಿತ್ತು. ಸುಮ್ಮನೆ ಯಾರೋ ಹುಡುಗರು ಇದನ್ನು ಮಾಡುವುದಿಲ್ಲ. ಇದನ್ನು ಯಾರೋ ಮಾಡಿಸುತ್ತಿದ್ದಾರೆ. ಹೀಗೆಯೇ ಆದರೆ ದೇಶದಲ್ಲಿ ಐಕ್ಯತೆ ಮೂಡುವುದು ಯಾವಾಗ ಎಂದು ಅವರು ಪ್ರಶ್ನಿಸಿದರು.