
ಬಾಗಲಕೋಟೆಯ ಕೆರೂರಿನಲ್ಲಿ ನಡೆದಿದ್ದ ಗುಂಪು ಘರ್ಷಣೆ ಸಂದರ್ಭದಲ್ಲಿ ಕುಳಗೇರಿ ಕ್ರಾಸ್ ಡಾಬಾ ಬಳಿ ನಡೆದಿದ್ದ ಹಲ್ಲೆಯಲ್ಲಿ ಗಾಯಗೊಂಡಿದ್ದ ಕುಟುಂಬದವರಿಗೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ನೀಡಿದ ಪರಿಹಾರವನ್ನು ಕುಟುಂಬಸ್ಥರು ಸಿದ್ಧರಾಮಯ್ಯ ಅವರ ವಾಹನದ ಮೇಲೆ ಎಸೆದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಇಂದು ನಡೆದಿದೆ.
ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಕುಳಗೇರಿ ಗ್ರಾಸ್ ಡಾಬಾ ಬಳಿ ನಡೆದ ಹಲ್ಲೆಯಲ್ಲಿ ಗಾಯಗೊಂಡಿದ್ದ ಮಹಮದ್ ಅಲೀಫ್, ರಫೀಕ್ ಸೇರಿದಂತೆ ನಾಲ್ವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಸಾಂತ್ವಾನ ಹೇಳಿ, ತಲಾ ೫೦ ಸಾವಿರ ರೂ. ಮೊತ್ತ ನೀಡಿದ್ದರು.ಗಾಯಗೊಂಡ ಕುಟುಂಬದ ಸದಸ್ಯರು ಈ ಹಣವನ್ನು ತೆಗೆದುಕೊಳ್ಳಲು ಹಿಂದೇಟು ಹಾಕಿದ್ದರು. ಅವರನ್ನು ಸಮಾಧಾನಪಡಿಸಿ ಹಣ ನೀಡಲಾಗಿತ್ತು.
ಸಿದ್ಧರಾಮಯ್ಯ ಅವರು ಸಾಂತ್ವಾನ ಹೇಳಿ ಹೊರ ಬಂದು ಕಾರಿನಲ್ಲಿ ಕುಳಿತು ಮುಂದಕ್ಕೆ ಹೋಗುತ್ತಿದ್ದಂತೆಯೇ ಗಾಯಾಳುಗಳ ಕುಟುಂಬಸ್ಥರು ಸಿದ್ಧರಾಮಯ್ಯ ಅವರ ವಾಹನದ ಮೇಲೆ ಹಣ ಎಸೆದು, ನಿಮ್ಮ ಹಣ ನಮಗೆ ಬೇಡ, ನಮಗೆ ಶಾಂತಿ ಬೇಕು ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗಾಯಗೊಂಡಿರುವ ರಫೀಕ್ ಸಹೋದರಿ ರಜ್ಮಾ ನಮಗೆ ರಕ್ಷಣೆ ಇಲ್ಲ, ರಕ್ಷಣೆ ಕೊಡಿ ದುಡ್ಡು ಬೇಡ ದುಡಿದು ತಿನ್ನುತ್ತೇವೆ. ರಾತ್ರಿ ವೇಳೆ ಓಡಾಡುವುದು ಕಷ್ಟವಾಗಿದೆ. ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಎಂದು ಜೋರಾಗಿ ಹೇಳಿದರು.
ಹಿಂದೂ, ಮುಸ್ಲಿಂ ಎಂಬ ಬೇಧ-ಭಾವ ಬೇಡ, ನಾವೆಲ್ಲ ಸೌಹಾರ್ದತೆಯಿಂದ ಬದುಕಿದ್ದೇವೆ. ನಿಮ್ಮ ಹಣ ಬೇಡ ಎಂದು ಆಕೆ ಕಾರಿನಲ್ಲಿ ಸಿದ್ದರಾಯಮ್ಮ ನೀಡಿದ ೨ ಲಕ್ಷ ರೂ. ಕಂತೆಯನ್ನು ಎಸೆದರು.
ಕೆಳಗಿ ಬಿದ್ದ ಹಣದ ಕಂತೆಯನ್ನು ಕಾಂಗ್ರೆಸ್ ನಾಯಕರೊಬ್ಬರು ಎತ್ತಿಕೊಂಡರು.ಘಟನೆ ನಡೆದು ಇಷ್ಟು ದಿನವಾದರೂ ಯಾರೂ ಬಂದೂ ನಮ್ಮನ್ನು ಮಾತನಾಡಿಸಿಲ್ಲ.
ಕೆಲ ಸಚಿವರುಗಳು ಬಂದರೂ ಕೆಲವರನ್ನಷ್ಟೇ ಮಾತನಾಡಿಸಿಕೊಂಡು ಹೋಗಿದ್ದಾರೆ ಎಂದು ಗಾಯಾಳುಗಳ ಕುಟುಂಬದ ಆಕ್ರೋಶ ವ್ಯಕ್ತಪಡಿಸಿದರು.ಮಾಜಿ ಶಾಸಕ ಹೆಚ್.ವೈ. ಮೇಟಿ ಸೇರಿದಂತೆ ಯಾರೂ ಬಂದಿಲ್ಲ. ಈಗ ನೀವು ಬಂದಿದ್ದೀರಿ ಎಂದು ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ಸಿದ್ಧರಾಮಯ್ಯ ಅವರ ಮುಂದೆಯೇ ಅಸಮಾಧಾನ ಹೊರ ಹಾಕಿದ್ದರು.
ಸಿದ್ಧರಾಮಯ್ಯನವರು ಗಾಯಾಳುಗಳನ್ನು ಸಮಾಧಾನಪಡಿಸಿದ್ದರಾದರೂ ಸಮಾಧಾನಗೊಳ್ಳದ ಗಾಯಾಳು ಕುಟುಂಬಸ್ಥರು ಸಿದ್ಧರಾಮಯ್ಯ ಅವರು ನೀಡಿದ ಹಣವನ್ನು ಅವರ ವಾಹನದ ಮೇಲೆ ಎಸೆದು ಸಿಟ್ಟು ತೋರಿದ್ದಾರೆ.ಗಾಯಾಳುಗಳ ಕುಟುಂಸ್ತರು ವಾಹನದ ಮೇಲೆ ಹಣ ಎಸೆಯುವ ವಿಡಿಯೋ ವೈರಲ್ ಆಗಿದೆ.