ಸಿದ್ದರಾಮಯ್ಯನವರಿಗೆ ಸಂಸ್ಕಾರ ಇದೆಯಾ..? : ರೇಣುಕಾಚಾರ್ಯ ಬೆಂಕಿ

ಐದು ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವ ಸಿದ್ದರಾಮಯ್ಯ ಅವರಿಗೆ ಸಂಸ್ಕಾರ ಗೊತ್ತಿದೆಯೇ? ಒಬ್ಬ ಮುಖ್ಯಮಂತ್ರಿಗೆ ಕೊಡುವ ಗೌರವ ಇದೆಯೇ? ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಯಿಮರಿಯಂತೆ ಇರುತ್ತಾರೆ ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.ಸಿದ್ದರಾಮಯ್ಯ ಅವರು ಹಿರಿಯ ರಾಜಕಾರಣಿಯಾಗಿದ್ದಾರೆ.
ಒಬ್ಬ ಮುಖ್ಯಮಂತ್ರಿಗೆ, ಅನೇಕ ಬಾರಿ ಪ್ರಧಾನಿ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆಕೊಡುತ್ತಿದ್ದಾರೆ. ಇದು ಅವರ ಘನತೆಗೆ ತರವಲ್ಲ ಎಂದು ಕಿಡಿಕಾರಿದರು.ನಿಮಗೆ ಸಂಸ್ಕಾರ ಗೊತ್ತಿದೆಯಾ, ನಾಯಿಪದ ಬಳಕೆ ಮಾಡುತ್ತೀರಾ ನಿಮ್ಮಂತೆ ಎದೆ ಹುಬ್ಬಿಸಿ ಮಾತಾಡಬೇಕಿತ್ತಾ? ಬೊಮ್ಮಾಯಿ ಅವರಿಗೆ ಅರಿವು ಇದೆ. ಏನು ಉತ್ತರ ಕೊಡಬೇಕು ಗೊತ್ತಿದೆ. ಪ್ರಧಾನಿ ಅವರಿಗೆ ಶಿಷ್ಟಾಚಾರದಂತೆ ನಮಸ್ಕಾರ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್‍ನ ಮನಮೋಹನ್ ಸಿಂಗ್ ಅವರು 10 ವರ್ಷ ಪ್ರಧಾನಿ ಆಗಿದ್ದರು. ಸೋನಿಯಾ ಗಾಂಧಿ, ಪ್ರಿಯಾಂಕ ಅವರು ಮನಮೋಹನ್ ಸಿಂಗ್‍ಗೆ ಅವಮಾನ ಮಾಡಿದರು ಎಂದು ವ್ಯಂಗ್ಯವಾಡಿದರು.ಕಾಂಗ್ರೆಸ್‍ನಲ್ಲಿ ಪವರ್ ಲೆಸ್ ಹೈಕಮಾಂಡ್ ಇದೆ. ನಾವಿಕ ನಿಲ್ಲದ ಹಡಗು ರಾಜ್ಯದಲ್ಲೂ ಇಲ್ಲ, ದೇಶದಲ್ಲೂ ಇಲ್ಲ, ನಿಮ್ಮ ಪಕ್ಷ ದೇಶದಲ್ಲಿ ಅಡ್ರೆಸ್ ಇಲ್ಲದಂತಾಗಿದೆ ಎಂದು ಟೀಕಿಸಿದ ಅವರು ನಾವು ಮತ್ತೇ ಅಧಿಕಾರಕ್ಕೆ ಬರುತ್ತೇವೆ.
ದೇಶ ಅಭಿವೃದ್ಧಿ ಮಾಡಿ ತೋರಿಸುತ್ತೇವೆ ಎಂದು ಸವಾಲು ಹಾಕಿದರು.ಈ ಹಿಂದೆ ಯಡಿಯೂರಪ್ಪ ವಿರುದ್ಧವೂ ಕೂಡ ಈ ರೀತಿ ಮಾತಾಡುತ್ತಿದ್ದೀರಿ, ಈಗ ಮುಖ್ಯಮಂತ್ರಿ ವಿರುದ್ಧ ಮಾತಾನಾಡುತ್ತಿದ್ದೀರಿ. ಅಭಿವೃದ್ಧಿಗೆ ಮತ್ತೊಂದು ಹೆಸರೇ ಬಿಜೆಪಿ. ಕಾಂಗ್ರೆಸ್ ನರಗಳಿಲ್ಲದ ಪಾರ್ಟಿ ಎಂದು ವ್ಯಂಗ್ಯವಾಡಿದರು.