
ಕೊಪ್ಪಳ: ಶಿಸ್ತು, ರಾಷ್ಟ್ರ ಭಕ್ತಿಗೆ ಹೆಸರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇತ್ತೀಚೆಗೆ ಅತಿಹೆಚ್ಚು ಟೀಕೆಗೆ ಒಳಗಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಕೊಪ್ಪಳದ ಬಾಲಕ ಹಾಡಿರುವ ಸಂಘದ ಪ್ರಾರ್ಥನಾ ಗೀತೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅನೇಕರು ಇದನ್ನು ಷೇರ್ ಮಾಡುವ ಮೂಲಕ ಸಂಘ ಪರಿವಾರಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.

ಸಂಘ ಪರಿವಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಇತರರು. ಕೆಲದಿನಗಳಿಂದ ನಿರಂತರ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಧರ್ಮ, ಜಾತಿ ವಿಷಯಗಳಲ್ಲಿನ ಪರ-ವಿರೋಧ ಚರ್ಚೆಗೆ ಗುರಿಯಾಗುತ್ತಿದೆ. ಈ ಬೆಳವಣಿಗೆಗಳ ನಡುವೆ ಜಿಲ್ಲೆಯ ಕಾರಟಗಿ ಪಟ್ಟಣದ ಕಾರ್ಪೆಂಟರ್ ಲಿಂಗರಾಜ್ ಎಂಬುವವರ ಪುತ್ರ ರೋಹಿತ್ ಹಾಡಿರುವ ‘ನಮಸ್ತೆ ಸದಾ ವತ್ಸಲೆ’ ಹಾಡು ಸಾಕಷ್ಟು ವೈರಲ್ ಆಗುತ್ತಿದೆ. ಈ ವಿಡಿಯೋ ಎರಡು ವರ್ಷ ಹಳೆಯದಾಗಿದ್ದರೂ, ಪ್ರಸ್ತುತ ಸಂದರ್ಭದಲ್ಲಿ ಹೆಚ್ಚು ಖ್ಯಾತಿ ಪಡೆದಿದೆ.

ರಾಜ್ಯ-ರಾಷ್ಟ್ರ ಬಿಜೆಪಿ ನಾಯಕರು, ಹಲವು ಚಿತ್ರನಟರು ಈ ವಿಡಿಯೋ ಶೇನ್ ಮಾಡುತ್ತಿದ್ದಾರೆ. ಶಾಲಾಮಕ್ಕಳಲ್ಲೂ ರಾಷ್ಟ್ರಭಕ್ತಿ ಜಾಗೃತವಾಗುತ್ತಿದೆ. ಭಾರತೀಯ ಸಂಸ್ಕೃತಿ’ ಎಂದರೆ ಇದು’ ಎಂದೆಲ್ಲ ವಿಡಿಯೋ ಬಗ್ಗೆ ಬರೆದುಕೊಂಡಿದ್ದಾರೆ. ಹೆಚ್ಚು ಹೆಚ್ಚು ಜನರು ವಿಡಿಯೋ ಷೇರ್ ಮಾಡಿ ತಮ್ಮದೇ ಧಾಟಿಯಲ್ಲಿ ಸಮರ್ಥನೆ ನೀಡುತ್ತಿದ್ದಾರೆ. ವಿಡಿಯೋ ಈವರೆಗೆ ಸುಮಾರು ಐದು ಮಿಲಿಯನ್ ವೀವ್ ಪಡೆದಿದೆ. ಉತ್ತರ ರಾಜ್ಯಗಳಾದ ದೆಹಲಿ, ಅಸ್ಸಾಂನಲ್ಲಿ ಅತಿ ಹೆಚ್ಚು ಷೇರ್ ಆಗಿದೆ. ವಿದೇಶದಲ್ಲಿನ ಹಲವರು ಫೇಸ್‌ಬುಕ್, ವಾಟ್ಸ್ ಆ್ಯಪ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸೂಪರ್ ಕಿಡ್ ಖ್ಯಾತಿಯಾಗಿರುವ ರೋಹಿತ್, ತನ್ನ ಜ್ಞಾನದಿಂದಲೇ ರಾಜ್ಯಾದ್ಯಂತ ಹೆಸರಾಗಿದ್ದಾನೆ. ಹಲವು ರಿಯಾಲಿಟಿ ಶೋಗಳಲ್ಲಿ ಪ್ರತಿಭೆ ಪ್ರದರ್ಶಿಸಿದ್ದು, ಮೆಚ್ಚುಗೆ ಗಳಿಸಿದ್ದಾನೆ: ಏಳು ವರ್ಷದ ಈ ಬಾಲಕ, ಚಿಕ್ಕ ವಯಸ್ಸಿಯಲ್ಲೇ ಹಲವು ಸಾಹಿತಿಗಳು, ರಾಜ್ಯ, ರಾಷ್ಟ್ರ ನಾಯಕರು, ಸಾಮಾನ್ಯ ಜ್ಞಾನದಲ್ಲಿ ತನ್ನ ಪ್ರತಿಭೆ ತೋರಿಸಿ ಹಲವು ದಾಖಲೆ ಬರೆದಿದ್ದಾನೆ. ಇದೀಗ ಸಂಘದ ಪ್ರಾರ್ಥನೆ ಗೀತೆ ಹಾಡಿ ಇದೀಗ ದೇಶ-ವಿದೇಶಗಳ ಗಮನ ಸೆಳೆದಿದ್ದಾನೆ.
