ಸಿಎಂ ಸ್ಥಾನದ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಪಕ್ಷ ಕಟ್ಟುವ ಕೆಲಸವಷ್ಟೆ ನನ್ನದು : ವಿಜಯೇಂದ್ರ

ನನಗೆ ಪಕ್ಷ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಪಕ್ಷ ಕಟ್ಟುವ ಕೆಲಸ ಮಾಡಲು ಶ್ರಮಿಸುತ್ತಿದ್ದೇನೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಸ್ಪಷ್ಟಪಡಿಸಿದರು .
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಮುಖ್ಯಮಂತ್ರಿ ಅಥವಾ ಇತರ ಹುದ್ದೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದರು.
ಸಚಿವರಾದ ನಾರಾಯಣಗೌಡ ಹಾಗೂ ಮುರುಗೇಶ್ ನಿರಾಣಿ ಅವರ, ವಿಜಯೇಂದ್ರ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ ನಿರಾಣಿ ಹಾಗೂ ನಾರಾಯಣಗೌಡ ಅವರು ಹಿರಿಯರಿದ್ದಾರೆ.
ಅವರ ಪ್ರೀತಿ ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ . ಆದರೆ ನಾನು ಇನ್ನೂ ರಾಜಕೀಯದಲ್ಲಿ ಅಂಬೆಗಾಲಿಡುತ್ತಿದ್ದೇನೆ.
ನಾನು ಪಕ್ಷದ ಕಾರ್ಯದರ್ಶಿಯಾಗಿ ಹಾಗೂ ಇದೀಗ ನಿರ್ವಹಿಸುತ್ತಿರುವ ಉಪಾಧ್ಯಕ್ಷ ಸ್ಥಾನ ಹಾಗೂ ಸಂಘಟನೆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ.
ಇನ್ನೂ ಸಹ ನಾನು ಶಾಸಕನಲ್ಲ ಆದ್ದರಿಂದ ಇಂತಹ ಹೇಳಿಕೆಗಳನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ರ್ಪಸಬೇಕು ಎಂಬ ಎಲ್ಲಾ ವಿಚಾರದ ಕುರಿತು ಪಕ್ಷ ತೀರ್ಮಾನ ಮಾಡಲಿದೆ.
ಅದರಂತೆ ನಾನು ನಡೆದುಕೊಳ್ಳುತ್ತೇನೆ ಎಂದರು. ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ವಿಚಾರವಾಗಿ ಜೆಡಿಎಸ್ ನಾಯಕರು ಕಾಂಗ್ರೆಸ್ ಬೆಂಬಲ ಕೋರಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ ಅವರು ಬಿಜೆಪಿಯ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.