ರಾಜ್ಯ

ಸಾವಿನ ಮನೆಯಲ್ಲಿ ಸಂಭ್ರಮ ಬೇಕಾ?: ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ರಾಜ್ಯ ಸಾವಿನ ಮನೆಯಾಗಿದೆ. ಇಂಥ ಸಂದರ್ಭದಲ್ಲಿ ಸರಕಾರಕ್ಕೆ ಸಂಭ್ರಮ ಯಾಕೆ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; ಸಾವಿನ ಮನೆಯಲ್ಲಿ ಸಂಭ್ರಮ ಯಾಕೆ? ಸಂಭ್ರಮಾಚರಣೆ ಮಾಡಲು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿರಬೇಕಲ್ಲವೇ? ಎಂದು ಪ್ರಶ್ನಿಸಿದರು.ಮುಕ್ತ ಮತ್ತು ಸುರಕ್ಷತೆ ವಾತಾವರಣ ಇಲ್ಲದೇ ಹೋದರೆ ಯಾವ ಗ್ಯಾರಂಟಿ ಮೇಲೆ ಜನರು ಮನೆಯಿಂದ ಆಚೆ ಬರುತ್ತಾರೆ.

ಯಾರಿಗೆ ಬೇಕಿದೆ ಇವರ ಸಂಭ್ರಮ? ಎಂದು ಕಿಡಿಕಾರಿದರು ಮಾಜಿ ಮುಖ್ಯಮಂತ್ರಿಗಳು.ಕಾಂಗ್ರೆಸ್, ಬಿಜೆಪಿ ಅಧಿಕಾರಕ್ಕೆ ಬಂದರೆ ಸಾವುಗಳು:ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರಗಳು ಇದ್ದಾಗ ಎಷ್ಟು ಸಾವುಗಳು ಆಗಿವೆ? ಮೈತ್ರಿ ಸರಕಾರವನ್ನು ತೆಗೆದು ಬಿಜೆಪಿ ಸರಕಾರ ಬಂದ ಮೇಲೆ ಎಷ್ಟು ಸಾವುಗಳು ಆಗಿವೆ? ಎನ್ನುವುದು ಜನರಿಗೆ ಗೊತ್ತಿದೆ.

ನಾನು ಮುಖ್ಯಮಂತ್ರಿ ಆಗಿದ್ದಾಗ ಈ ರೀತಿಯ ಸಾವುಗಳು ಆಗಿರಲಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಶಾಂತಿ ಸುವ್ಯವಸ್ಥೆ ಹಾಳಾಗಿ ಎಷ್ಟೆಲ್ಲಾ ಜನರು ಸತ್ತರು? ಇದೆನ್ನೆಲ್ಲವನ್ನು ಲೆಕ್ಕಾಚಾರ ಮಾಡಬೇಕಿದೆ ಎಂದರು ಅವರು.ಪೊಲೀಸ್ ಇಲಾಖೆಗೆ ಶಕ್ತಿ ತುಂಬಿ:ಬಿಜೆಪಿ ಸರಕಾರಕ್ಕೆ ನಾನು ಹೇಳುವುದು ಇಷ್ಟೆ, ಮೊದಲು ಪೊಲೀಸ್ ಇಲಾಖೆಯನ್ನು ಭದ್ರಗೊಳಿಸಿ.

ಅಧಿಕಾರಿಗಳಿಗೆ ಶಕ್ತಿ ಕೊಡಿ. ಆದರೆ, ಒಂದು ಕೆಲಸಕ್ಕೆ ರೇಟ್ ಫಿಕ್ಸ್ ಮಾಡಿದರೆ ಅಥವಾ ಹಣ ಕೊಟ್ಟ ಅಧಿಕಾರಿ ನ್ಯಾಯಯುತವಾಗಿ ಕೆಲಸ ಮಾಡುತ್ತಾನಾ? ಕಂದಾಯ, ಪೊಲೀಸ್ ಇಲಾಖೆ ಸೇರಿ ಎಲ್ಲ ಇಲಾಖೆಗಳಲ್ಲಿ ಈ ರೀತಿ ಆಗುವುದನ್ನು ನಿಲ್ಲಿಸಿ, ಜನರ ಜತೆ ಚೆಲ್ಲಾಟ ಆಡುತ್ತಿದ್ದೇವೆ.

ಒಂದು ಕೋಟಿ ಕೊಟ್ಟು ಬರುವ ಅಧಿಕಾರಿ ಜನರ ಕೆಲಸ ಮಾಡುತ್ತಾರಾ? ಸಂಭ್ರಮಾಚರಣೆ ಜನರ ರಕ್ಷಣೆಯಲ್ಲಿರಬೇಕು. ಪ್ರಚಾರ ಕೊಟ್ಟು ಸಂಭ್ರಮಿಸುವುದಲ್ಲ ಎಂದು ಅವರು ಕಟುವಾಗಿ ಟೀಕಿಸಿದರು.ಸತ್ತ ಮೇಲೆ ಕೃತಕ ಸಂತಾಪ ಏಕೆ?ರಾಜ್ಯದ ಪುತ್ತೂರು ತಾಲೂಕಿನಲ್ಲಿ ಯುವಕನ ಹತ್ಯೆಯಾಗಿದೆ, ಇದು ಅತ್ಯಂತ ಖಂಡನೀಯ.

ಯಾಕೆ ಇಂಥ ಘಟನೆಗಳು ಆಗುತ್ತಿವೆ ಎಂಬ ಬಗ್ಗೆ ಎಲ್ಲ ಪಕ್ಷಗಳೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮಗನನ್ನು ಕಳೆದುಕೊಂಡ ಆ ತಾಯಿಯ ದುಃಖವನ್ನು ಒಮ್ಮೆ ಗಮನಿಸಿ. ನಾವು ಆ ಕುಟುಂಬದ ಭಾವನೆ ಅರ್ಥ ಮಾಡಿಕೊಳ್ಳಬೇಕು.

ಜೀವ ಹೋದ ಮೇಲೆ ಕೇವಲ ‘ಕೃತಕ ‘ ಸಂತಾಪ ಅಥವಾ ‘ಕೃತಕ’ ಸಾಂತ್ವನ ಹೇಳುವುದರಿಂದ ಉಪಯೋಗವಿಲ್ಲ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.ರಾಜಕಾರಣಿಗಳು ಸಾವಿನ‌ ನಂತರ ಸಾಂತ್ವಾನ, ಪರಿಹಾರ ಕೊಡುವುದರಿಂದ ಹೋದ ಜೀವ ಮತ್ತೆ ವಾಪಸ್ ತರಲು ಆಗಲ್ಲ. ಬಿಜೆಪಿ ಸರಕಾರ ಇದ್ದಾಗ ಈ ಘಟನೆ ಕಾಣುತ್ತಿದ್ದೇವೆ.

ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೂ ಹೀಗೆ ಆಗಿತ್ತು. ಎಲ್ಲಿಯೂ ರಾಜಕಾರಣಿಗಳು, ಶ್ರೀಮಂತರ ಸಾವು ಆಗಲ್ಲ. ಆದರೆ, ಅಮಾಯಕರು ಬಲಿ ಆಗುತ್ತಿದ್ದಾರೆ. ಶಿವಮೊಗ್ಗದಲ್ಲಿ ಹರ್ಷ ಎಂಬ ಯುವಕನ ಹತ್ಯೆ ಆದಾಗ ಸರಕಾರವೇ ಹೋಗಿತ್ತು.

ಆಗ ಮಂತ್ರಿಗಳೂ, ನಾಯಕರು ಎಲ್ಲರೂ ಆ ಕೊಲೆಯ ವಿರುದ್ಧ ಅಬ್ಬರಿಸಿದ್ದರು. ಅದಾದ ನಂತರ ಸರಣಿ ಸಾವುಗಳು ಆಗುತ್ತಿವೆ. ಹತ್ಯೆಗಳನ್ನು ನಿಲ್ಲಿಸಲು ಎಲ್ಲ ಪಕ್ಷಗಳು ರಾಜ್ಯದ ಎಲ್ಲಾ ಮಠಾಧಿಪತಿಗಳ ಮಾರ್ಗದರ್ಶನದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು.ಹತ್ಯೆಯಾದ ಯುವಕನ ಊರಿನಲ್ಲಿ ಲಾಠಿ ಚಾರ್ಜ್ ಆಗುತ್ತಿದೆ.

ಆ ಯುವಕ ಸಣ್ಣ ಅಂಗಡಿ ಇಟ್ಟುಕೊಂಡು ಜೀವನ ಮಾಡಿಕೊಂಡಿದ್ದ. ಈ‌ ನಾಡಿನ‌ ಒಬ್ಬ ಯುವಕ, ತಂದೆ ತಾಯಿ ಸಾಕುವ ಒಬ್ಬ ಜವಾಬ್ದಾರಿ ಇದ್ದ ಯುವಕ. ಇದನ್ನೆಲ್ಲಾ ಸರಕಾರ, ರಾಜಕೀಯ ಪಕ್ಷಗಳು ಗಮನಿಸಬೇಕು.‌ ಕೃತಕ ಸಂತಾಪ ಸೂಚಿಸುವ ಅವಶ್ಯಕತೆ ಇಲ್ಲ.

ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕವನ್ನು ರಕ್ಷಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಒತ್ತಾಯ ಮಾಡಿದರು.ಭಾವನಾತ್ಮಕ ವಿಚಾರಗಳನ್ನು ಹಾಗೂ ಇಂಥ ಸಾವುಗಳನ್ನು ರಾಜಕೀಯ ಪಕ್ಷಗಳು ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿವೆ.

ರಾಜಕೀಯಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿವೆ. ಸಾವಿನ ಮೇಲೆ ರಾಜಕೀಯ ಸಿಂಹಾಸನ ಮಾಡಿಕೊಳ್ಳುವುದು ಸರಿಯಲ್ಲ. ಈ ರೀತಿ ಸಾವು ನೋವು ನೋಡಲು ಅಧಿಕಾರ ಬೇಕಾ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.ಮೊನ್ನೆ ಇನ್ನೊಂದು ಧರ್ಮದ ಹತ್ಯೆಯಾಗಿದೆ.

ಈ ಘಟನೆಗಳಾದಾಗ ಮುಂಜಾಗ್ರತಾ ಕ್ರಮ ವಹಿಸಬೇಕು. ಹತ್ಯೆಯಾದಾಗ ಸಂತಾಪ ಸೂಚಿಸುವುದಕ್ಕಿಂತ ಹತ್ಯೆ ಆಗುವುದಕ್ಕೂ ಮುನ್ನ ಎಚ್ಚೆತ್ತುಕೊಳ್ಳಬೇಕು. ಇಲ್ಲಿ ಎಲ್ಲರ ಜವಾಬ್ದಾರಿ ಮುಖ್ಯ ಆಗುತ್ತದೆ.

ಎಲ್ಲಾ ಧರ್ಮದ ಸಂಘಟನೆ, ಧಾರ್ಮಿಕ ಗುರುಗಳ ಸಭೆ ಮಾಡಿ, ಶಾಂತಿಯ ತೋಟ ಕಾಪಾಡಬೇಕಾಗಿದೆ ಎಂದು ಸಲಹೆ ನೀಡಿದರು.ನಾಡಿನ ಪರಂಪರೆ, ಇತಿಹಾಸವನ್ನು ಹಾಳು ಮಾಡೋದು ಬೇಡ.

ವೀರಾವೇಶದ ಮಾತುಗಳು ಅಗತ್ಯ ಇಲ್ಲ ಕೊಳೆಗೆಡುಕರನ್ನು ಬಗ್ಗು ಬಡಿತೀವಿ ಅಂತಾರೆ. ಮಗನನ್ನು ಕಳೆದುಕೊಂಡ ತಾಯಿಗೆ ಅಳಬೇಡಮ್ಮ ಅಂತಾರೆ. ಆದರೆ ಅಳು‌ ನಿಲ್ಲಬೇಕಲ್ಲವೇ? ಅಳು ನಿಲ್ಲಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾ.

ಮತ್ತೊಂದು ಹತ್ಯೆ ಆಗದೇ ಇರುವ ರೀತಿ ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ಹತ್ಯೆಗಳನ್ನು ನಿಲ್ಲಿಸಿದರೆ ಅದೇ ಉತ್ಸವ:ಇವರೆಲ್ಲ ಸಂಭ್ರಮ, ಉತ್ಸವ ಮಾಡಲು ಹೊರಟಿದ್ದಾರೆ. ಇದರಿಂದ ಹತ್ಯೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ.

ಇವುಗಳನ್ನು ನಿಲ್ಲಿಸಿದರೆ ಅದಕ್ಕಿಂತ ಮತ್ತೊಂದು ಉತ್ಸವ ಬೇರೆ ಇಲ್ಲ. ಈಗ ಕಾಂಗ್ರೆಸ್ ಭ್ರಷ್ಟೋತ್ಸವ ಅಂತಾರೆ. ಇವರೇನು ಪಾರದರ್ಶಕ ಆಡಳಿತ ಕೊಟ್ಟಿದ್ದಾರಾ? ಎಂದು ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು, ಜನರ ಕಷ್ಟ ಸುಖಕ್ಕೆ ನಾವು ಕಾರ್ಯಕ್ರಮ ಕೊಡುತ್ತೇವೆ.

ನಾವು ಜನಾಭಿಪ್ರಾಯ ಮೂಡಿಸಲು ಜನರ ಬಳಿಯೇ ಹೋಗುತ್ತೇವೆ. ಅದೇ ನಮ್ಮ ಕಾರ್ಯಕ್ರಮಗಳು ಎಂದರು.ಕಠಿಣ ಕ್ರಮ ಬಾಯಿ ಮಾತಲ್ಲಿ ಆಗುವುದಲ್ಲ. ನಾವು ಸುಮ್ಮನೆ ಕೂರಲ್ಲ ಎಂದು ಇಂದು ಬಿಜೆಪಿ ನಾಯಕರ ಬಾಯಲ್ಲಿ ಬಂದಿದೆ. ವೀರಾವೇಶದ ಮಾತುಗಳಿಂದ ಅಶಾಂತಿ ಕಾಣುತ್ತೇವೆ. ನೆಮ್ಮದಿ ಇರಲ್ಲ.

ಇಂಥಹ ಘಟನೆಗಳಿಂದ ಏನೋ ಅನುಕೂಲ ಆಗಬಹುದು ಅಂತ ಅಂದರೆ ತಪ್ಪು. ಆ ಜನ‌ ಕೂಡ ಎಚ್ಚೆತ್ತುಕೊಳ್ಳುತ್ತಿದ್ದಾರೆ.

ಸರಿಯಾದ ಆಡಳಿತ ಕೊಡಿ ಅಷ್ಟೆ ಎಂದು ಹೆಚ್ ಡಿಕೆ ವಾಗ್ದಾಳಿ ನಡೆಸಿದರು.ಶಾಸಕರಾದ ವೆಂಕಟರಾವ್ ನಾಡಗೌಡ, ರಾಜಾ ವೆಂಕಟಪ್ಪ ನಾಯಕ ಹಾಗೂ ಮಾಜಿ ಶಾಸಕ ಚೌಡರೆಡ್ಡಿ ತೂಪಲ್ಲಿ ಈ ಸಂದರ್ಭದಲ್ಲಿ ಹಾಜರಿದ್ದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button