
ರಣ ಮಳೆ ಸೃಷ್ಟಿಸಿರೋ ಅವಾಂತರ ಒಂದೆರಡಲ್ಲ. ಮಳೆ ಆರಂಭಕ್ಕೂ ಮುನ್ನವೆ ಹಾಳಾಗಿದ್ದ ಇಲ್ಲಿನ ರಸ್ತೆಗಳು ಇತ್ತೀಚೆಗೆ ಬಿದ್ದ ರಣಮಳೆಯಿಂದಾಗಿ ಸಾವಿನ ಗುಂಡಿಗಳಾಗಿ ಪರಿವರ್ತನೆಯಾಗಿವೆ.
ನಗರದ ಬಹುತೇಕ ರಸ್ತೆಗಳು ಹಾಳಾಗಿದ್ದು, ಇಂತಹ ರಸ್ತೆಗಳಲ್ಲಿ ವಾಹನ ಸಂಚಾರ ಮಾಡುವುದೇ ದುಸ್ತರವಾಗಿದೆ. ಗುಂಡಿ ದಾಟಿಸಲು ವಾಹನ ನಿಧಾನವಾಗಿ ಚಲಿಸಿದರೆ ಹಿಂದಿನಿಂದ ಬರುವ ವಾಹನಗಳು ಡಿಕ್ಕಿ ಹೊಡೆಯುವ ಸಾಧ್ಯತೆಗಳಿವೆ.
ಹೀಗಾಗಿ ಗುಂಡಿ ಬಿದ್ದ ರಸ್ತೆಗಳಲ್ಲಿ ವಾಹನ ಸವಾರರು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಚಲಾಯಿಸುವಂತಹ ಪರಿಸ್ಥಿತಿ ಎದುರಾಗಿದೆ.
ಅದರಲ್ಲೂ ಪ್ರಮುಖವಾಗಿ ಇತ್ತೀಚೆಗೆ ಭಾರೀ ಮಳೆಗೆ ಸಿಲುಕಿದ್ದ ಪೂರ್ವ ವಲಯದ ಹಲವಾರು ರಸ್ತೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿರುವುದು ಕಂಡು ಬರುತ್ತಿದೆ.ಒಂದು ಅಂದಾಜಿನ ಪ್ರಕಾರ, ನಗರದಲ್ಲಿ 16 ಸಾವಿರ ಕಿ.ಮೀ. ಉದ್ದದ ರಸ್ತೆಗಳು ಗುಂಡಿಮಯವಾಗಿವೆ.
ಇದು ಸಿಲಿಕಾನ್ ಸಿಟಿಯ ಮಾನ ಹರಾಜು ಹಾಕುತ್ತಿದೆ. ಗುಂಡಿ ಮುಚ್ಚಲೆಂದೇ ಬಿಬಿಎಂಪಿ 30 ಲಕ್ಷ ರೂ.ಗಳನ್ನು ಖರ್ಚು ಮಾಡುತ್ತಿದ್ದರೂ ಕಳೆದ ಒಂದು ವಾರದಲ್ಲಿ ನಗರದ ರಸ್ತೆಗಳಲ್ಲಿ ಸರಿ ಸುಮಾರು 15,000ಕ್ಕೂ ಹೆಚ್ಚು ಗುಂಡಿಗಳು ಸೃಷ್ಟಿಯಾಗಿವೆಯಂತೆ.
ಕೆಲ ದಿನಗಳ ಹಿಂದೆ ಹಾಕಲಾಗಿದ್ದ ಡಾಂಬರು ಕಿತ್ತು ಬರುತ್ತಿದ್ದು, ಗುಂಡಿಮಯವಾಗಿರುವ ನಗರದ ರಸ್ತೆಗಳನ್ನು ದುರಸ್ತಿಪಡಿಸಲು ಬಿಬಿಎಂಪಿ ಸಿಬ್ಬಂದಿಗಳು ಹರಸಾಹಸ ಮಾಡುತ್ತಿದ್ದಾರೆ.