
ಟೈಲರ್‍ವೊಬ್ಬ ಪತ್ನಿಯನ್ನು ಕೊಲೆ ಮಾಡಿ ಮಗಳ ಕೊಲೆಗೂ ಯತ್ನಿಸಿರುವ ಘಟನೆ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುಂಜಾನೆ ನಡೆದಿದೆ. ಮತ್ತಿಕೆರೆ ನಿವಾಸಿ ಅನುಸೂಯ (42) ಕೊಲೆಯಾದ ಮಹಿಳೆ. ಗಾಯಗೊಂಡಿರುವ ಪುತ್ರಿ ಸಹನಾ (14) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ವೃತ್ತಿಯಲ್ಲಿ ದಾನೇಂದ್ರ ರೆಡ್ಡಿ ಮತ್ತು ಅನುಸೂಯಾ ದಂಪತಿ ಟೈಲರ್.
ಇವರ ಮಗಳು ಸಹನಾ 9ನೆ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ.ದಾನೇಂದ್ರ 2 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಸಾಲಬಾಧೆಯಿಂದ ಮನನೊಂದಿದ್ದ ಆತ ಪತ್ನಿ-ಮಗಳನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ.
ಅದರಂತೆ ಇಂದು ಬೆಳಗಿನ ಜಾವ ಪತ್ನಿ-ಮಗಳು ಮಲಗಿದ್ದಾಗ ದಾನೇಂದ್ರ ಎದ್ದು ಮೊದಲು ಚಾಕುವಿನಿಂದ ಪತ್ನಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ. ನಂತರ ಮಗಳ ಕುತ್ತಿಗೆಗೂ ಇರಿದಿದ್ದಾನೆ. ಜಾಗೃತಳಾದ ಸಹನಾ ಸತ್ತವಳಂತೆ ವರ್ತಿಸಿದ್ದಾಳೆ.
ಪತ್ನಿ-ಮಗಳು ಮೃತಪಟ್ಟಿದ್ದಾರೆಂದು ತಿಳಿದುಕೊಂಡು ದಾನೇಂದ್ರ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದಾಗ ಮಗಳು ಬದುಕಿರುವುದನ್ನು ಕಂಡು ನಾನೂ ಆತ್ಮಹತ್ಯೆ ಮಾಡಿಕೊಂಡರೆ ಆಕೆಯನ್ನು ನೋಡಿಕೊಳ್ಳುವವರು ಯಾರು ಎಂದು ತನ್ನ ನಿರ್ಧಾರದಿಂದ ಹಿಂದೆ ಸರಿದು ತಕ್ಷಣ ಪೊಲೀಸ್ ಕಂಟ್ರೋಲ್ ರೂಂ (112)ಗೆ ಕರೆ ಮಾಡಿದ್ದಾನೆ.ಪೊಲೀಸರು ಸ್ಥಳಕ್ಕೆ ಆಗಮಿಸಿ ಮನೆ ಪರಿಶೀಲನೆ ನಡೆಸಿದಾಗ ಅನುಸೂಯ ಮೃತಪಟ್ಟಿರುವುದು ಕಂಡುಬಂದಿದೆ.
ಗಾಯಗೊಂಡಿದ್ದ ಸಹನಾಳನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ, ಆರೋಪಿ ದಾನೇಂದ್ರನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸಾಲದಿಂದಾಗಿ ಈ ಕೃತ್ಯವೆಸಗಿದ್ದಾಗಿ ತಿಳಿಸಿದ್ದಾನೆ. ಈ ಬಗ್ಗೆ ಯಶವಂತಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.