ರಾಷ್ಟ್ರಿಯ

ಸಾಲಕ್ಕೆ ಹೆಚ್ಚುತ್ತಿದೆ ಬೇಡಿಕೆ, ಆದರೆ ಕೊಡಲು ಹಣವಿಲ್ಲದೆ ಪರದಾಡುತ್ತಿವೆ ಬ್ಯಾಂಕುಗಳು

ಕೊರೊನಾ ನಂತರ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿದ್ದು ದೇಶದಲ್ಲಿ ಸಾಲದ ಬೆಳವಣಿಗೆಯು ಮೂರು ವರ್ಷಗಳ ಗರಿಷ್ಠ ಮಟ್ಟದಲ್ಲಿದೆ. ಆದರೆ ಠೇವಣಿಗಳಲ್ಲಿನ ನಿಧಾನಗತಿಯ ಬೆಳವಣಿಗೆಯಿಂದಾಗಿ ಬ್ಯಾಂಕ್‌ಗಳು ಹಣಕ್ಕಾಗಿ ಅಲೆದಾಡುವಂತಾಗಿದೆ. ಪರಿಣಾಮ ತ್ವರಿತವಾಗಿ ಠೇವಣಿ ದರಗಳನ್ನು ಹೆಚ್ಚಿಸುತ್ತಿವೆ ಎಂದು ವಿಶ್ಲೇಷಕರು ಮತ್ತು ಬ್ಯಾಂಕರ್‌ಗಳು ಹೇಳಿದ್ದಾರೆ.
ಹೆಚ್ಚಿನ ಹಣದುಬ್ಬರದಿಂದಾಗಿ ಉಳಿತಾಯ ಕುಸಿದಿದ್ದು, ಠೇವಣಿದಾರರು ಉತ್ತಮ ಆದಾಯದ ಹುಡುಕಾಟದಲ್ಲಿ ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡಿದ್ದಾರೆ. ಹೀಗಾಗಿ ಠೇವಣಿ ಬೆಳವಣಿಗೆಯು ಕುಸಿದಿದೆ ಎಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ಹೇಳಿದ್ದಾರೆ.
ಇವೆಲ್ಲದರ ಹಿನ್ನೆಲೆಯಲ್ಲಿ ಠೇವಣಿ ಹೆಚ್ಚಿಸುವ ಸಲುವಾಗಿ, ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್‌ ಎಚ್‌ಡಿಎಫ್‌ಸಿ ಬ್ಯಾಂಕ್ ಅನಿವಾಸಿ ಭಾರತೀಯರಿಗೆ ಬಲೆ ಬೀಸಿದೆ. ವಿದೇಶದಲ್ಲಿ ನೆಲೆಸಿರುವ ಭಾರತೀಯರ ಖಾತೆಗಳಿಗೆ ಹೆಚ್ಚಿನ ಬಡ್ಡಿದರವನ್ನು ನೀಡುವ ಮೂಲಕ ಠೇವಣಿಗಳನ್ನು ಹೆಚ್ಚಿಸಲು ತುರ್ತು ಕ್ರಮಕ್ಕಿಳಿದಿದೆ. ಇತರ ಬ್ಯಾಂಕುಗಳು ಕೂಡ ಇದೇ ದಾರಿ ಹಿಡಿಯಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ.

ಕೇಂದ್ರೀಯ ಬ್ಯಾಂಕ್ ಕ್ರಮಗಳಿಂದ ವ್ಯವಸ್ಥೆಯಲ್ಲಿನ ಹೆಚ್ಚುವರಿ ನಿಧಿಗಳು ನಿಧಾನವಾಗಿ ಹೊರಹೋಗುವುದರಿಂದ, ಬ್ಯಾಂಕ್‌ಗಳ ಮಾರ್ಜಿನ್‌ ಮತ್ತು ಲಾಭದಾಯಕತೆ ಒತ್ತಡಕ್ಕೆ ಒಳಗಾಗಬಹುದು. ಇದರಿಂದ ಠೇವಣಿ ದರಗಳನ್ನು ಹೆಚ್ಚಿಸುವುದು ಅನಿವಾರ್ಯ, ಜತೆಗೆ ಕ್ರೆಡಿಟ್ ಬೇಡಿಕೆಯನ್ನು ಪೂರೈಸಲು ಅಗತ್ಯವಿರುವ ಹಣಕ್ಕಾಗಿ ಹೆಚ್ಚು ದುಬಾರಿಯಾದ ಬಂಡವಾಳ ಮಾರುಕಟ್ಟೆಗಳಿಗೆ ಹೋಗಬೇಕಾಗಬಹುದು.
ಇದು ಹೂಡಿಕೆದಾರರನ್ನು ಚಿಂತೆಗೀಡುಮಾಡಲಿದ್ದು, ಈಗಾಗಲೇ ಜಾಗತಿಕ ಕಾರಣಗಳಿಂದ ಕುಸಿದಿರುವ ಬ್ಯಾಂಕ್‌ಗಳ ಷೇರುಗಳು ಮತ್ತಷ್ಟು ಕೆಳಕ್ಕಿಳಿಯಬಹುದು.
ಕಳೆದ ವಾರ ತನ್ನ ಒಂದು ಟಿಪ್ಪಣಿಯಲ್ಲಿ ರೇಟಿಂಗ್ ಏಜೆನ್ಸಿ ಐಸಿಆರ್‌ಎ, ಬ್ಯಾಂಕುಗಳು “ಠೇವಣಿಗಳನ್ನು ಆಕ್ರಮಣಕಾರಿಯಾಗಿ ಬೆನ್ನಟ್ಟಲಿರುವುದರಿಂದ ಠೇವಣಿ ದರಗಳು ಹೆಚ್ಚಲಿವೆ,” ಎಂದು ಅಂದಾಜಿಸಿದೆ.

ಸಾಲದ ಬೆಳವಣಿಗೆ ದರ ಏರಿಕೆ
ಭಾರತೀಯ ಬ್ಯಾಂಕ್‌ಗಳ ಠೇವಣಿ ಬೆಳವಣಿಗೆಯು ಪ್ರಸ್ತುತ ಶೇ. 9.8ರಷ್ಟಿದ್ದು, ಒಂದಂಕಿಯಲ್ಲೇ ಉಳಿದುಕೊಂಡಿದೆ. ಇದು ಕಳೆದ 14 ತಿಂಗಳುಗಳಲ್ಲಿ ಬಹುಪಾಲು ಒಂದಂಕಿಯಲ್ಲೇ ಇದೆ. ಆದರೆ 2021ನೇ ಆರ್ಥಿಕ ವರ್ಷದಲ್ಲಿ ಶೇ. 5.6ರಷ್ಟಿದ್ದ ಸಾಲದ ಬೆಳವಣಿಗೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು ಶೇ. 14.4ಕ್ಕೆ ಮುಟ್ಟಿದೆ.
ವೈಯಕ್ತಿಕ ಸಾಲಗಳು, ಅಡಮಾನಗಳು, ವಾಹನ ಸಾಲಗಳನ್ನು ಒಳಗೊಂಡಿರುವ ಚಿಲ್ಲರೆ ಸಾಲದ ಬೆಳವಣಿಗೆಯು ವೇಗವಾಗಿದ್ದು, ಸ್ಥಿರವಾಗಿ ಬೆಳೆಯುತ್ತಿದೆ ಮತ್ತು ಕಾರ್ಪೊರೇಟ್ ಸಾಲಗಳನ್ನೇ ಮೀರಿಸುತ್ತಿವೆ.
“ಕಳೆದ ಕೆಲವು ವರ್ಷಗಳಿಂದ ಭಾರತೀಯ ಬ್ಯಾಂಕಿಂಗ್ ವಲಯಕ್ಕೆ ವೈಯಕ್ತಿಕ ಸಾಲಗಳು ಪ್ರಮುಖ ಬೆಳವಣಿಗೆಯ ವಲಯಗಳಾಗಿವೆ. ಇದೇ ವೇಳೆ ಎನ್‌ಪಿಎಗಳ (ನಿರ್ವಹಣೆ ಮಾಡದ ಆಸ್ತಿಗಳು) ಕಾರಣಕ್ಕೆ ಹಾಗೂ ಡೆಲಿವರಿಜಿಂಗ್‌ನಿಂದಾಗಿ ಕಾರ್ಪೊರೇಟ್ ಸಾಲವು ಸ್ಥಗಿತಗೊಂಡಿದೆ,” ಎಂದು ಕೇರ್ ರೇಟಿಂಗ್ಸ್ ಈ ವಾರದ ಆರಂಭದ ವರದಿಯಲ್ಲಿ ತಿಳಿಸಿದೆ.
ಮುಂದಿನ ದಿನಗಳಲ್ಲಿ ಸಾಲದ ಬೆಳವಣಿಗೆಯ ನಿರೀಕ್ಷೆಗಳು ಆಶಾದಾಯಕವಾಗಿದ್ದರೂ, ಹೆಚ್ಚಿನ ಹಣದುಬ್ಬರ ಮತ್ತು ದರ ಏರಿಕೆಯಿಂದಾಗಿ ಠೇವಣಿ ಸಂಗ್ರಹದ ಮೇಲೆ ನಿರೀಕ್ಷೆಗಳು ಉಳಿದುಕೊಂಡಿಲ್ಲ. ಇದರ ನಡುವೆ ಬ್ಯಾಂಕ್‌ಗಳ ಕ್ರೆಡಿಟ್-ಠೇವಣಿ ಅನುಪಾತ ಸ್ಥಿರವಾಗಿ ಏರುತ್ತಿದ್ದು, ಬ್ಯಾಂಕ್‌ಗಳ ಒಟ್ಟಾರೆ ಠೇವಣಿಗಳಲ್ಲಿ ಶೇ. 73ರಷ್ಟನ್ನು ಸಾಲವಾಗಿ ನೀಡಲಾಗುತ್ತಿದೆ.
ಆದರೆ ಕ್ರೆಡಿಟ್ ಬೇಡಿಕೆ ಹೆಚ್ಚಾದಂತೆ ಠೇವಣಿ ಬೆಳವಣಿಗೆಯು ಹೊಂದಾಣಿಕೆಯಾಗದಿದ್ದಲ್ಲಿ ಬ್ಯಾಂಕ್‌ಗಳ ಮೇಲೆ ಒತ್ತಡ ಬೀಲಿದೆ. “ಮುಂದಿನ ಕೆಲವು ತಿಂಗಳುಗಳಲ್ಲಿ ಇದೇ ಟ್ರೆಂಡ್‌ ಮುಂದುವರಿದರೆ ಠೇವಣಿ ದರಗಳನ್ನು ಹೆಚ್ಚಿಸುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆಗಳಿಲ್ಲ. ಏಕೆಂದರೆ ಬಂಡವಾಳವನ್ನು ಸಂಗ್ರಹಿಸಲು ಮಾರುಕಟ್ಟೆಗೆ ಹೋಗಲು ಮಾರುಕಟ್ಟೆಯ ಪರಿಸ್ಥಿತಿಗಳೂ ನಮಗೆ ಹೆಚ್ಚು ಅನುಕೂಲಕರವಾಗಿಲ್ಲ,” ಎಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ನ ಹಿರಿಯ ಕಾರ್ಯನಿರ್ವಾಹಕರೊಬ್ಬರು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button