ಸಾರ್ವಜನಿಕರೇ, ತುರ್ತು ದೂರುಗಳಿದ್ದಲ್ಲಿ 112ಗೆ ಕರೆ ಮಾಡಿ

ತುರ್ತು ದೂರುಗಳಿದ್ದಲ್ಲಿ ನಗರದ ನಾಗರಿಕರು ತಕ್ಷಣ 112ಗೆ ಕರೆ ಮಾಡಿ ದೂರು ನೀಡಿ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.ವೈಟ್‍ಫೀಲ್ಡ್ ವಿಭಾಗದ ಪೊಲೀಸರು ವಶಪಡಿಸಿಕೊಂಡಿರುವ ಕಳವು ಮಾಲುಗಳ ಪ್ರದರ್ಶನವನ್ನು ಎಚ್‍ಎಎಲ್ ಪೊಲೀಸ್ ವಸತಿ ಗೃಹಗಳ ಮೈದಾನದಲ್ಲಿ ವೀಕ್ಷಿಸಿ, ವಾರಸುದಾರರಿಗೆ ಹಸ್ತಾಂತರಿಸಿ ನಂತರ ಮಾತನಾಡಿದರು.
ದೂರುಗಳಿದ್ದಲ್ಲಿ ನೀವು ಕಚೇರಿ ಹಾಗೂ ಪೊಲೀಸ್ ಠಾಣೆಗಳಿಗೆ ಹೋಗಿ ಸಮಯ ವ್ಯರ್ಥ ಮಾಡುವ ಬದಲು ತಕ್ಷಣ 112ಗೆ ಕರೆ ಮಾಡಿದರೆ ದೂರು ದಾಖಲಾಗುತ್ತದೆ. ನಿಮ್ಮ ಮಾಹಿತಿಯು ವಾಯ್ಸ್ ರೆಕಾರ್ಡ್‍ನಲ್ಲಿರುತ್ತದೆ. ನಾವು ಆ ಬಗ್ಗೆ ಪರಿಶೀಲಿಸುತ್ತೇವೆ ಎಂದರು.ಜಾಗೃತರಾಗಿರಿ:ಯಾರೇ ನಿಮ್ಮ ಮೊಬೈಲ್‍ಗಳಿಗೆ ಕರೆ ಮಾಡಿ ನಿಮಗೆ ಲಾಟರಿ ಬಂದಿದೆ.
ಬಹುಮಾನ ಬಂದಿದೆ ಹಣ ವರ್ಗಾವಣೆ ಮಾಡಿ ಎಂದು ಆಮಿಷವೊಡ್ಡಿದರೆ ಜಾಗೃತರಾಗಿರಿ. ನೀವು ಯಾವುದೇ ಕಾರಣಕ್ಕೂ ಇಂತಹ ಅಪರಿಚಿತರಿಗೆ ಮೊಬೈಲ್‍ನಲ್ಲಿ ಹಣ ವರ್ಗಾವಣೆ ಮಾಡಿ ಮೋಸ ಹೋಗದಿರಿ ಎಂದು ಆಯುಕ್ತರು ಕಿವಿ ಮಾತು ಹೇಳಿದರು.ಮನೆಗೆ ಸುರಕ್ಷಾ ಉಪಕರಣ ಅಳವಡಿಸಿಕೊಳ್ಳಿ:ಕೋಟ್ಯಾಂತರ ವೆಚ್ಚ ಮಾಡಿ ದೊಡ್ಡ ದೊಡ್ಡ ಮನೆಯನ್ನು ಕಟ್ಟಿಸುತ್ತೀರಿ.
ಆದರೆ ಅದಕ್ಕೆ ಬೇಕಾದಂತಹ ಸುರಕ್ಷತೆಯನ್ನು ಮಾಡಿಕೊಳ್ಳುವುದಿಲ್ಲ. ಉತ್ತಮವಾದ ಬೀಗ, ಡೋರ್ ಹಾಕಿಸಿಕೊಳ್ಳಬೇಕು. ಜೊತೆಗೆ ಸಿಸಿ ಟಿವಿ ಅಳವಡಿಸಿದರೆ ಅಪರಾಧ ತಡೆಗಟ್ಟಲು ಸಾಧ್ಯ ಎಂದು ಸಾರ್ವಜನಿಕರಿಗೆ ಅರಿವು ಮೂಡಿಸಿದರು.ಅಪರಾಧ ತಡೆಗಟ್ಟಲು ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ.
ತಮ್ಮ ಸುತ್ತ-ಮುತ್ತಲು ಯಾವುದೇ ಘಟನೆ ನಡೆದರೂ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರೆ ಕ್ಷಣಾರ್ಧದಲ್ಲಿ ಪೊಲೀಸರು ಆಗಮಿಸಿ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸುತ್ತಾರೆ ಎಂದರು.ಇದೇ ಸಂದರ್ಭದಲ್ಲಿ ವೈಟ್‍ಫೀಲ್ಡ್ ವಿಭಾಗದ ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.