
ಮೈಸೂರು ಪೊಲೀಸರು ಎಫ್ ಐ ಆರ್ ದಾಖಲು ಮಾಡಿರುವ ಸಾಂಟ್ರೋ ರವಿ ಹಾಗೂ ರಾಜ್ಯ ಬಿಜೆಪಿ ಸರಕಾರದ ಕೆಲ ಪ್ರಭಾವಿ ಸಚಿವರ ನಡುವೆ ಇರುವ ಸಂಬಂಧ ಏನು? ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲೆಬೇಕು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆವರು ದಮ್ಮು ತಾಕತ್ತು ಬಗ್ಗೆ ಮಾತನಾಡುತ್ತಾರೆ, ಇಲ್ಲಿ ಅವರು ದಮ್ಮು ತಾಕತ್ತು ತೋರಿಸಲಿ ಎಂದು ಟಾಂಗ್ ನೀಡಿದರು ರಾಜ್ಯವು ಬಿಜೆಪಿ ನಾಯಕರಿಂದ ಉಳಿಯಲು ಸಾಧ್ಯವಿಲ್ಲ.
ಈ ಸರಕಾರದ ಮಂತ್ರಿಗಳ ಹಣೆಬರಹ ಇಲ್ಲಿದೆ ನೋಡಿ ಎಂದು ಸಾಂಟ್ರೋ ರವಿ ಜತೆ ಪೋಸು ಕೊಟ್ಟಿರುವ ಮಂತ್ರಿಗಳ ಚಿತ್ರಗಳನ್ನು ಬಹಿರಂಗಪಡಿಸಿದ ಅವರು, ಸಾಂಟ್ರೋ ರವಿ ಎಂಬಾತ ಅನೇಕ ಸಚಿವರ ಜತೆ ನಂಟು ಹೊಂದಿದ್ದಾನೆ. ಫೋಟೋಗಳನ್ನು ತೆಗೆಸಿಕೊಂಡಿದ್ದಾನೆ.
ಆದರೆ, ಶಿಕ್ಷಣ ಸಚಿವ ನಾಗೇಶ್ ಅವರ ಜತೆ ಅದೇಗೆ ಹೋಗಿ ಫೋಟೋ ತೆಗೆಸಿಕೊಂಡನೋ ಗೊತ್ತಿಲ್ಲ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.ಸಾಂಟ್ರೋ ರವಿ ಎನ್ನುವ ಈ ವ್ಯಕ್ತಿ ಯಾರು? ಈ ಸರಕಾರದಲ್ಲಿ ಯಾರೊಂದಿಗೆ ಈತನ ಸಂಪರ್ಕ ಇದೆ.
ಈತನ ಬಗ್ಗೆ ಮಾಹಿತಿಯನ್ನು ರಹಸ್ಯವಾಗಿಡಿ ಎಂದು ಯಾರಿಗೆ ಸೂಚನೆ ಕೊಟ್ಟಿದ್ದೀರಿ? ಎಂದು ಪ್ರಶ್ನಿಸಿದರು ಕುಮಾರಸ್ವಾಮಿ ಅವರು.ಈ ವ್ಯಕ್ತಿ ಮೇಲೆ ಎಷ್ಟಿದೆ ಕೇಸ್ ಗಳು ಇವೆ? ಸ್ಯಾಂಟ್ರೋ ರವಿಗೆ ಐದು ಹೆಸರುಗಳಿವೆ. 1995ರಿಂದಲೂ ಈತನ ಮೇಲೆ ಕೆಸುಗಳಿವೆ.
ಮೈಸೂರು, ಬೆಂಗಳೂರುನಲ್ಲಿ ಎಷ್ಟೋ ಕೇಸ್ ಇವೆ? ಕಳೆದ ತಿಂಗಳವರೆಗೆ ಕುಮಾರಕೃಪ ಅತಿಥಿ ಗೃಹದಲ್ಲಿ ಇವನಿಗೆ ಕೊಠಡಿ ಕೊಟ್ಟವರು ಯಾರು? ಕೊಠಡಿ ಕೊಡುವಂತೆ ಯಾರು ಶಿಫಾರಸು ಮಾಡಿದ್ದರು? ಇದೆಲ್ಲವನ್ನು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜ್ಯದ ಜನತೆಗೆ ತಿಳಿಸಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.
ಕುಮಾರಕೃಪದಲ್ಲಿ ಕೂತು ಈತ ಭಾರೀ ವ್ಯವಹಾರ ನಡೆಸಿದ್ದಾನೆ. ಇವನ ಹಿಂದೆ ಅಡಗಿ ಕೂತಿರುವ ಅಸಲಿ ವ್ಯಕ್ತಿ ಯಾರು? ಪೊಲೀಸ್ ಅಧಿಕಾರಿಗೆ ಇವನು ಮೊಬೈಲ್ ಕರೆ ಮಾಡಿ, ನಾಳೆ ಬಂದು ನೋಡು ಅಂತ ಹೇಳುತ್ತಾನೆ.
ತನ್ನ ಸರ್ ಎಂದು ಕರೆಯುವಂತೆ ಆ ಪೊಲೀಸ್ ಅಧಿಕಾರಿಗೆ ತಾಕೀತು ಮಾಡುತ್ತಾನೆ. ಇದೆಲ್ಲಾ ದಾಖಲೆ ಇದೆ ಎಂದು ಸ್ಪೋಟಕ ಮಾಹಿತಿಯನ್ನು ಕುಮಾರಸ್ವಾಮಿ ಅವರು ಬಹಿರಂಗ ಮಾಡಿದರು.
ರೀ ಏನು ತಿಳಿದುಕೊಂಡಿದ್ದೀರಾ? ಸ್ವತಃ ಮುಖ್ಯಮಂತ್ರಿಯೇ ನನ್ನನ್ನು ಸರ್ ಅಂತ ಕರೀತಾರೆ. ನೀನು ಸರ್ ಅಂತಿಲ್ಲ ಅಂತ ಆ ಪೊಲೀಸ್ ಅಧಿಕಾರಿಗೆ ಸಾಂಟ್ರೋ ರವಿ ಅನ್ನುವನ್ನು ಧಮ್ಕಿ ಹಾಕುತ್ತಾನೆ ಎಂದರೆ ಈ ಸರಕಾರದ ಮಾನ ಮರ್ಯಾದೆ ಎಲ್ಲಿಗೆ ಬಂದು ನಿಂತಿದೆ ಎನ್ನುವುದನ್ನು ಜನರು ಊಹೆ ಮಾಡಬಹುದು. ಇದು ಸರ್ಕಾರವಾ? ಇವರ ಕರ್ನಾಟಕವನ್ನ ರಕ್ಷಣೆ ಮಾಡುವವರು ಎಂದು ಅವರು ಕಿಡಿ ಕಾರಿದರು.
ಕಳೆದ ಒಂದು ತಿಂಗಳಿಂದ ಮಾತ್ರ ಅವನು ಎಲ್ಲಾ ನಿಲ್ಲಿಸಿದ್ದಾನೆ. ದಲಿತ ಕುಟುಂಬದ ಹೆಣ್ಣು ಮಗಳು ಇವನ ಮೇಲೆ ಕಂಪ್ಲೇಂಟ್ ಕೊಟ್ಟಿದ್ದಾರೆ. ಇಂಥವನ ಹೆಗಲ ಮೇಲೆ ಕೇಸರಿ ಟವೆಲ್ ಹಾಕಿ ಪಕ್ಷಕ್ಕೆ ಸೇರಿಸಿಕೊಂಡ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು.
ನಮ್ಮ ಮೇಲೆ ಟ್ರೋಲ್ ಮಾಡ್ತಾರಲಾ ಬಿಜೆಪಿ ಸೋಷಿಯಲ್ ಮೀಡಿಯಾವರು, ದಮ್ಮು, ತಾಕತ್ತು ಇದ್ದರೆ ಈ ವಿಷಯವನ್ನು ಟ್ರೋಲ್ ಮಾಡಲಿ ಎಂದು ಸವಾಲು ಹಾಕಿದರು.
ಅಧಿಕಾರಿಗಳಿಗೆ ಇವನು ಧಮ್ಕಿ ಹಾಕಿದ್ದಾನೆ. ಆ ಅಧಿಕಾರಿಗಳಿಗೆ ಹೇಳ್ತಾನಂತೆ, ಕುಂಬಳಗೋಡಿಗೆ ಯಾರದ್ದೋ ಕೆಲಸ ಆಗೋಯ್ತು ,50 ಲಕ್ಷಕ್ಕೆ.
ನೆಲಮಂಗಲ ಎರಡು ತಿಂಗಳಲ್ಲಿ ಖಾಲಿ ಆಗುತ್ತೆ, ವೈಯ್ಟ್ ಮಾಡಿ ಎಂದು ಹೇಳುತ್ತಾನಂತೆ. ನನಗೆ ಇರುವ ಮಾಹಿತಿ ಪ್ರಕಾರ ಕೋಟ್ಯಂತರ ರೂಪಾಯಿ ವ್ಯವಹಾರ ನಡೆದಿದೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.