ಸಲಿಂಗ ವಿವಾಹಕ್ಕೆ ಅನುಮತಿ ಬೇಡವೇ ಬೇಡ: ಬಿಜೆಪಿ ಸಂಸದರು

ಭಾರತದಲ್ಲಿ ಸಲಿಂಗ ಸಂಬಂಧಕ್ಕೆ ಅವಕಾಶ ಇದೆ, ಮದುವೆಗೆ ಯಾವುದೇ ಕಾರಣಕ್ಕೂ ಅನುಮತಿ ಕೊಡಬಾರದು. ಇದೊಂದು ಸಾಮಾಜಿಕ ವಿಚಾರವಾಗಿದ್ದು ಕೋರ್ಟ್ ಈ ಬಗ್ಗೆ ಯಾವುದೇ ತೀರ್ಪು ನೀಡಬಾರದು ಎಂದು ಬಿಜೆಪಿ ಸಂಸದರು ಒತ್ತಾಯಿಸಿದ್ದಾರೆ.
ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ, ದೇಶದಲ್ಲಿ ಸಲಿಂಗ ವಿವಾಹದ ಬಗ್ಗೆ ದೊಡ್ಡಮಟ್ಟದ ಚರ್ಚೆ ನಡೆಯುತ್ತಿರುವುದರ ಹಿಂದೆ ಪಾಶ್ಚಿಮಾತ್ಯ ಹಿತಾಸಕ್ತಿ ಅಡಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ಗಂಡು- ಗಂಡನ್ನು, ಹೆಣ್ಣು-ಹೆಣ್ಣನ್ನು ಮದುವೆ ಆಗುವುದರಿಂದ ಸಾಮಾಜಿಕ ವಿಘಟನೆಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
‘ಸುಪ್ರೀಂಕೋರ್ಟ್ ಹಾಲ್‌ನಲ್ಲಿ ಕುಳಿತುಕೊಳ್ಳುವ ಇಬ್ಬರು ಜಡ್ಜ್ ಗಳು ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ನಿರ್ಣಯ ಕೈಗೊಳ್ಳಬಾರದು.
ಇದೊಂದು ಸಾಮಾಜಿಕ ವಿಚಾರ. ಇದರ ಬಗ್ಗೆ ಸಂಸತ್ ಹಾಗೂ ಸಾರ್ವಜನಿಕ ಚರ್ಚೆ ಬಳಿಕವಷ್ಟೇ ನಿರ್ಧಾರ ಕೈಗೊಳ್ಳಬೇಕು ಎಂದು ಸುಶೀಲ್ ಕುಮಾರ್ ಮೋದಿ,ಸಲಹೆ ನೀಡಿದ್ದಾರೆ.
ಸಲಿಂಗ ವಿವಾಹಕ್ಕೆ ಅನುಮತಿ ಕೋರಿ ದೇಶದ ವಿವಿಧ ಕೋರ್ಟ್‌ಗಳಲ್ಲಿ ಅರ್ಜಿ ಸಲ್ಲಿಕೆಯಾಗಿವೆ. ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಪ್ರಕರಣದ ವಿಚಾರಣೆ ನಡೆಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗಿದೆ.
ಡಿ.14ರಂದು ಸಿಜೆಐ ಚಂದ್ರಚೂಡ್ ನೇತೃತ್ವದ ಪೀಠ ಅರ್ಜಿಗಳ ವರ್ಗಾವಣೆ ಕೋರಿ ಸಲ್ಲಿಸಿದ್ದ ಮನವಿ ಸ್ವೀಕರಿಸಿದೆ.ಸಲಿಂಗ ವಿವಾಹ ದೇಶದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಪದ್ಧತಿಗೆ ವಿರುದ್ಧವಾದುದು.
ಸಲಿಂಗ ವಿವಾಹಕ್ಕೆ ಅನುಮತಿ ನೀಡಿದರೆ ವೈಯಕ್ತಿಕ ಕಾನೂನಿನ ಸೂಕ್ಷ್ಮತೆಗೆ ಧಕ್ಕೆಯಾಗುತ್ತದೆ ಎಂದು ಸುಶೀಲ್ ಮೋದಿ ಹೇಳಿದ್ದು, ಭಾರತದಲ್ಲಿ ಯಾವುದೇ ಕಾನೂನು ಸಲಿಂಗ ವಿವಾಹವನ್ನು ಸಮ್ಮತಿಸುವುದಿಲ್ಲ. ಅದು ಮುಸ್ಲಿಂ ವೈಯಕ್ತಿಕ ಕಾನೂನು ಇರಬಹುದು ಅಥವಾ ಕ್ರೋಡೀಕರಿಸಲಾದ ಶಾಸನಬದ್ಧ ಕಾನೂನುಗಳಲ್ಲಿ ಕೂಡ ಅನುಮತಿ ನೀಡಿಲ್ಲ.
ಹೀಗಿರುವಾಗ ದೇಶದಲ್ಲಿ ಸಲಿಂಗ ವಿವಾಹದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿರುವುದರ ಹಿಂದೆ ಪಾಶ್ಚಿಮಾತ್ಯ ಹಿತಾಸಕ್ತಿ ಅಡಗಿರಬಹುದು ಎಂದಿದ್ದಾರೆ.