
ತುಮಕೂರು, ಮೇ 13- ನಗರದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಯರಿಬ್ಬರು ಪರಸ್ಪರ ಪ್ರೀತಿಸಿ, ಮದುವೆ ಮಾಡಿಸುವಂತೆ ಪೊಲೀಸರಿಗೆ ದುಂಬಾಲು ಬಿದ್ದ ಘಟನೆ ನಗರ ತಿಲಕ್ ಪಾರ್ಕ್ ಠಾಣೆಯಲ್ಲಿ ನಡೆದಿದೆ. ಯುವತಿಯರ ಪ್ರೀತಿ, ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಲಿಂಗ ಮದುವೆ ಮಾಡಿಸುವಂತೆ ನಗರದ ತಿಲಕ್ ಪಾರ್ಕ್ ಠಾಣೆಗೆ ಹೋದ ಯುವತಿಯರು ಸಲಿಂಗ ಪ್ರೇಮದ ವಿಚಾರವನ್ನು ಪೊಲೀಸರಿಗೆ ತಿಳಿಸಿ, ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.ಪರಸ್ಪರ ಪ್ರೀತಿಸುತ್ತಿದ್ದು ಮದುವೆಯಾಗುವುದಾಗಿ ನಿರ್ಧರಿಸಿದ್ದೇವೆ, ಇದಕ್ಕೆ ಅವಕಾಶ ಮಾಡಿಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ನಗರ ವಾಸಿಗಳಾಗಿರುವ ಈ ಯುವತಿಯರ ಸಲಿಂಗ ಮದುವೆ ಎಲ್ಲರ ಗಮನ ಸೆಳೆದಿದೆ. ಮದುವೆ ಮಾಡಿಕೊಳ್ಳಲು ಮನೆ ಬಿಟ್ಟು ಹೊರಬಂದವರು ಈಗ ಪೋಲೀಸರ ನೆರವು ಕೋರಿದ್ದಾರೆ.
ಈ ಇಬ್ಬರು ಯುವತಿಯರು ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕೆಲ ದಿನಗಳ ಮಟ್ಟಿಗೆ ಕಾಣೆಯಾಗಿದ್ದ ಯುವತಿಯರು ಬಳಿಕ ತುಮಕೂರಿಗೆ ಆಗಮಿಸಿ ಮದುವೆಯಾಗುವುದಾಗಿ ತೀರ್ಮಾನಿಸಿ ಪೋಲೀಸರಲ್ಲಿ ಮನವಿ ಮಾಡಿಕೊಂಡಿದ್ದು, ಇದಕ್ಕೆ ಪೋಲೀಸರು ನಿರಾಕರಿಸಿದ್ದಾರೆ. ಆದರೆ ಮದುವೆ ಮಾಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವತಿಯರು ಬೆದರಿಕೆ ಹಾಕಿದ್ದಾರೆಂದು ತಿಳಿದು ಬಂದಿದ್ದು, ಒಬ್ಬ ಯುವತಿಯ ಪೋಷಕರು ಮದುವೆಗೆ ಸಮ್ಮತಿಸಿದ್ದರು ಎನ್ನಲಾಗಿದೆ. ಮತ್ತೂಬ್ಬ ಯುವತಿಯ ಪೋಷಕರು ವಿರೋಧಿಸಿ ಯುವತಿಯನ್ನು ಕರೆದೊಯ್ದಿದ್ದಾರೆ.