ರಾಜ್ಯ
Trending

ಸರ್ಕಾರ ಕಮಿಷನ್ ದಂಧೆಗೆ ಕಡಿವಾಣ ಹಾಕಬೇಕು : ಗುತ್ತಿಗೆದಾರರ ಸಂಘ

ಸಚಿವ ಕೆ.ಎಸ್.ಈಶ್ವರಪ್ಪ ಅವರ ರಾಜೀನಾಮೆ ಪಡೆಯುವ ಜೊತೆಗೆ, ರಾಜ್ಯ ಸರ್ಕಾರ ಕಮಿಷನ್ ದಂಧೆಗೆ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ಮೇ 25ರಿಂದ ರಾಜ್ಯಾದ್ಯಂತ ಒಂದು ತಿಂಗಳ ಕಾಲ ಎಲ್ಲಾ ರೀತಿಯ ಕಾಮಗಾರಿ ನಿಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಘೋಷಿಸಿದೆ.ನಗರದಲ್ಲಿಂದು ಚಾಮರಾಜಪೇಟೆಯ ಗುತ್ತಿಗೆದಾರರ ಸಂಘದ ಕೇಂದ್ರ ಕಚೇರಿಯಲ್ಲಿ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ, ಬಿಜೆಪಿ ಸದಸ್ಯರೂ ಆದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ಅಥವಾ ಹೈಕೋರ್ಟಿನ ಹಾಲಿ ನ್ಯಾಯೀಧಿಶರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರರ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ ನೀಡಬೇಕು. ಕೂಡಲೇ ಗುತ್ತಿಗೆ ಹಣ ಬಿಡುಗಡೆ ಮಾಡಬೇಕು. ಗುತ್ತಿಗೆದಾರನ ಸಾವಿಗೆ ಸರ್ಕಾರವೇ ನೇರ ಹೊಣೆಯಾಗಿದೆ. ಅವರ ಕುಟುಂಬಕ್ಕೆ ಸಾಂತ್ವಾನ ಹೇಳುವ ಬದಲು ಪರಿಹಾರ ನೀಡಬೇಕೆಂದು ಆಗ್ರಹಿಸಿದರು.ಸಾವಿಗೆ ಯಾರು ಕಾರಣವೆಂದ ಡೆತ್ ನೋಟ್ ನಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಸಚಿವರು ಶೇ.40ರಷ್ಟು ಕಮೀಷನ್ ಕೇಳುತ್ತಿದ್ದಾರೆಂದು ಆರೋಪ ಮಾಡಿದ್ದರು. ದೆಹಲಿಗೆ ತೆರಳಿ ಗೃಹ ಸಚಿವ ಅಮಿತ್ ಷಾ ಹಾಗೂ ಪ್ರಧಾನಿ ನರೇಂದ್ರಮೋದಿ ಅವರಿಗೂ ದೂರು ಸಲ್ಲಿಸಿದ್ದರು.ದೆಹಲಿಯಲ್ಲಿ ದೂರು ಕೊಟ್ಟಾಗಲೇ ಸ್ಪಂದಿಸಿದ್ದರೆ ಅವರ ಜೀವ ಉಳಿಯುತ್ತಿತ್ತು. ಸಚಿವರು ಮಾನವೀಯತೆಯಿಂದ ನಡೆದುಕೊಂಡಿದ್ದರೆ ಜೀವ ಬಲಿಯಾಗುತ್ತಿರಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಅಷ್ಟೇ ಅಲ್ಲದೆ, ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಸರ್ಕಾರ ನೇರ ಕಾರಣ, ಅದರಲ್ಲೂ ಈಶ್ವರಪ್ಪನವರೇ ಕಾರಣ ಎಂದ ಅವರು, ಆತ್ಮಹತ್ಯೆ ಅಲ್ಲ. ಕೊಲೆ ಮಾಡಿದ್ದಾರೆ ಎಂದು ಆಪಾದಿಸಿದರು. ರೌಡಿಗಳನ್ನು ಕರೆಸಿ ಬೆದರಿಸಿದ್ದಾರೆ. ಈ ಬಗ್ಗೆ ನನಗೆ ಹದಿನೈದು ದಿನದ ಹಿಂದೆ ಕರೆ ಮಾಡಿ ಸಂತೋಷ್ ಮಾತನಾಡಿದ್ದರು. ಒಂದೂವರೆ ತಿಂಗಳಿಂದ ಮನೆಗೆ ಹೋಗದಂತೆ ಮಾಡಿದ್ದರು ಎಂದು ಆರೋಪಿಸಿದರು.ಭ್ರಷ್ಟಾಚಾರ, ಕಮಿಷನ್ ದಂಧೆ ಕುರಿತು ಸುದ್ದಿ, ಸಾಕ್ಷ್ಯ ಇದ್ದರೂ, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಸೌಜನ್ಯಕ್ಕೂ ನಮ್ಮನ್ನು ಕರೆದು ಸಭೆ ಮಾಡಿಲ್ಲ. ಎಷ್ಟು ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಈಗಾಗಲೇ ನಾವು ಕಮಿಷನ್ ವಿಚಾರವಾಗಿಯೇ ಮಾಜಿ ಸಿಎಂ ಯಡಿಯೂರಪ್ಪ, ಮುಖ್ಯಮಂತ್ರಿ ಮತ್ತು ಪ್ರಧಾನಿಗೆ ಪತ್ರ ಬರೆದಿದ್ದೆವು ಎಂದು ತಿಳಿಸಿದರು.ಪ್ರಮುಖವಾಗಿ 2019 ರಿಂದ ಕಮೀಷನ್ ದಂಧೆ ಹೆಚ್ಚಾಗಿದೆ. ಪ್ರಧಾನಿ ಅವರಿಗೆ ಪತ್ರ ಕೊಟ್ಟ ಮೇಲೆ ಸಂತೋಷ್ ಗೆ ಬೆದರಿಕೆ ಹೆಚ್ಚಾಗಿತ್ತು. ಹೀಗಾಗಿ ತಲೆ ಮರೆಸಿಕೊಂಡು ಓಡಾಡುತ್ತಿದ್ದರು. ಅದೇ ರೀತಿ ಶಾಸಕರ ಮಕ್ಕಳೇ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರದುರ್ಗದ ಶಾಸಕರೊಬ್ಬರ ಮಗ ಗುತ್ತಿಗೆದಾರರಾಗಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ಭ್ರಷ್ಟಚಾರದ ದಾಖಲೆಗಳನ್ನು ಬಳಿಕ ಬಿಡುಗಡೆ ಮಾಡುತ್ತೇವೆ ಎಂದು ಅವರು ಹೇಳಿದರು.ಸುಧಾಕರ್ ವಿರುದ್ದ ಆರೋಪ: ಶಾಸಕರು, ಸಚಿವರುಗಳನ್ನು ಸಾಕಿದ್ದೇ ನಾವು. ಒಂದು ಕಡೆ ಕಾರ್ಯಾದೇಶ ಆಗದೆ ಕಾಮಗಾರಿ ಆಗುತ್ತದೆ. ಗುತ್ತಿಗೆದಾರ ಸ್ವಂತ ದುಡ್ಡು ಖರ್ಚು ಮಾಡಿ ಕೆಲಸ ಮಾಡುತ್ತಾರೆ. ಕಮಿಷನ್ ಕುರಿತಾಗಿ ಆರೋಗ್ಯ ಸಚಿವ ಸುಧಾಕರ್ ಅವರ ವಿರುದ್ದವೂ ಕೆಂಪಣ್ಣ ಆಕ್ರೋಶ ವ್ಯಕ್ತಪಡಿಸಿದರು.ಗುತ್ತಿಗೆದಾರರು ಹೋರಾಟ ಮಾಡುತ್ತೇವೆ. ಎಲ್ಲರ ಬಂಡವಾಳ ಬಯಲಾಗುತ್ತದೆ. ಸಂತೋಷ್ ಪಾಟೀಲ್ ಕುಟುಂಬಕ್ಕೆ ಅಸೋಸಿಯೇಷನ್ ನಿಂದ ಎರಡು ಲಕ್ಷ ರೂ. ನೀಡುತ್ತೇವೆ. ಆರೋಗ್ಯ ಇಲಾಖೆಯಲ್ಲಿ ಶೇಕಡಾ 60 ರಷ್ಟು ಕೆಲಸವನ್ನು ಅವರ ಸಂಬಂಕರೇ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಕೇವಲ ಗ್ರಾಮೀಣಾಭಿವೃದ್ಧಿ ಸಚಿವ ಮಾತ್ರವಲ್ಲ, ಲೋಕೋಪಯೋಗಿ, ಆರೋಗ್ಯ ಇಲಾಖೆಯ ಕಮಿಷನ್ ಫೈಲ್ ಅನ್ನು ಬಿಡುಗಡೆ ಮಾಡುತ್ತೇವೆ. ಪ್ರಮುಖವಾಗಿ ಸಚಿವ ಡಾ.ಕೆ.ಸುಧಾಕರ್ ಅವರ ಇಲಾಖೆಯಲ್ಲೂ ಕಮಿಷನ್ ಇದೆ.ಅಲ್ಲಿ ಬರೋಬ್ಬರಿ ಶೇ.60ರಷ್ಟು ಕಮಿಷನ್ ನಡೆತಿದೆ ಎಂದರು.ಮೃತ ಗುತ್ತಿಗೆದಾರ ಕೆಲವು ದಿನಗಳ ಹಿಂದೆ ನನ್ನ ಜತೆ ದೂರವಾಣಿ ಮೂಲಕ ಮಾತನಾಡಿದ್ದರು. ಈಶ್ವರಪ್ಪ ಅವರ ಪುತ್ರನಿಗೆ ಒಂದಷ್ಟು ಹಣ ನೀಡಿದ್ದು, ಇನ್ನೂ ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ವಿಷಯ ತಿಳಿಸಿದ್ದರು.ಸಂತೋಷ್ ಪಾಟೀಲ ಸಚಿವರ ವಿರುದ್ಧ ಆರೋಪ ಮಾಡಿರುವ ಕುರಿತು ಮಾರ್ಚ್ 11ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಿದ್ದೆ. ಅವರು ಪ್ರತಿಕ್ರಿಯೆಯನ್ನೇ ನೀಡಿರಲಿಲ್ಲ. ಅಲ್ಲದೆ, ಲಂಚಕ್ಕಾಗಿ ಬೇಡಿಕೆ ಇಟ್ಟು, ಹಿಂಸೆ ಕೊಟ್ಟಿರುವುದೇ ಗುತ್ತಿಗೆದಾರನ ಸಾವಿಗೆ ಕಾರಣ. ಈ ಬಗ್ಗೆ ಸಮಗ್ರವಾದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಸಂಘದ ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ, ಶಾಸಕರು, ಸಚಿವರು ನಮಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಮೊದಲು ಇದಕ್ಕೆ ಕಡಿವಾಣ ಹಾಕುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.ಕಳಪೆ ಕಾಮಗಾರಿ: ಕಮಿಷನ್ ದಂಧೆ ಕಾರಣದಿಂದಾಗಿ ಎಲ್ಲಾ ಕಾಮಾಗಾರಿಗಳು ಕಳಪೆಯಿಂದ ಕೂಡಿರುತ್ತವೆ. ಉದಾಹರಣೆಗೆ 10 ಸಾವಿರ ಕೋಟಿ ರೂ. ವೆಚ್ಚ ಮಾಡಿ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ, ರಾಜರಾಜೇಶ್ವರಿ ನಗರದಲ್ಲಿ ಆ ರಸ್ತೆ ಕಳಪೆಯಿಂದ ಕೂಡಿದೆ ಎಂದು ಆರೋಪಿಸಿದರು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button