ಸರ್ಕಾರದ ಮಾರ್ಗಸೂಚಿಗೆ ಜನ ಡೋಂಟ್ ಕೇರ್

ರಾಜ್ಯದಲ್ಲಿ ಹೊಸ ಮಾದರಿಯ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಿಯಂತ್ರಣಕ್ಕಾಗಿ ಕೈಗೊಂಡಿರುವ ಮಾರ್ಗಸೂಚಿಗಳ ಬಗ್ಗೆ ಸಾರ್ವಜನಿಕರು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರುತ್ತಿರುವುದು ಕಂಡುಬರುತ್ತಿದೆ.
ಮಾರುಕಟ್ಟೆ ಜನನಿಬಿಡ ಪ್ರದೇಶ, ಮಾಲ್, ಸಿನಿಮಾ ಥಿಯೇಟರ್, ಸಂತೆಮೈದಾನ, ಬಸ್ ನಿಲ್ದಾಣ, ಮೆಟ್ರೊ, ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಶಾಲಾಕಾಲೇಜುಗಳು ಸೇರಿದಂತೆ ಮತ್ತಿತರ ಕಡೆ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರು, ವಿದ್ಯಾರ್ಥಿಗಳು ಮಾಸ್ಕ್ ಹಾಕುವುದು, ಸಾನಿಟೈಸರ್ ಬಳಕೆ ಮಾಡಬೇಕೆಂದು ಸರ್ಕಾರ ಸೋಮವಾರ ರಾತ್ರಿಯಿಂದ ಮಾರ್ಗಸೂಚಿ ಹೊರಡಿಸಿದೆ.
ಹೆಚ್ಚು ಜನಸಂದಣಿ ಇರುವ ಸ್ಥಳಗಳಲ್ಲಿ ಪ್ರತಿಯೊಬ್ಬರು ಎನ್95 ಮಾಸ್ಕ್ ಧರಿಸುವುದು ಹಾಗೂ ಸಾರ್ವಜನಿಕರಿಗೆ ಮಾಸ್ಕ್ ಮತ್ತು ಸಾನಿಟೈಸರ್‍ಗೆ ಜನಜಾಗೃತಿ ಮೂಡಿಸಬೇಕೆಂದು ಸರ್ಕಾರ ಮನವಿ ಮಾಡಿಕೊಂಡಿತ್ತು. ಆದರೆ ರಾಜ್ಯದ ಬಹುತೇಕ ಕಡೆ ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಯನು ಗಂಭೀರವಾಗಿ ತೆಗೆದುಕೊಳ್ಳದೆ ನಿರ್ಲಕ್ಷ್ಯ ತೋರುತ್ತಿದ್ದಾರೆ.
ರಾಜಧಾನಿ ಬೆಂಗಳೂರು, ಮೈಸೂರು, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ದಾವಣಗೆರೆ, ಮಂಗಳೂರು, ಕಲಬುರಗಿ ಸೇರಿದಂತೆ ಬಹುತೇಕ ರಾಜ್ಯದ ಎಲ್ಲ ಜಿಲ್ಲೆಯಿಂದ ಹಿಡಿದು ಗ್ರಾಮಪಂಚಾಯ್ತಿವರೆಗೂ ಮಾರ್ಗಸೂಚಿಯನ್ನು ಗಂಭೀರವಾಗಿ ಪರಿಗಣಿಸದೆ ಉದಾಸೀನ ತೋರುತ್ತಿರುವ ದೃಶ್ಯಗಳು ಕಂಡುಬಂದಿವೆ.
ಬೆಂಗಳೂರಿನ ಕೆಆರ್‍ಮಾರುಕಟ್ಟೆ, ಮೆಜೆಸ್ಟಿಕ್, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಜಯನಗರ ಬಹುತೇಕ ಕಡೆ ಮಾರುಕಟ್ಟೆಗಳು, ಮಾಲ್‍ಗಳು, ಸಿನಿಮಾ ಥಿಯೇಟರ್‍ಗಳು ಮತ್ತಿತರ ಕಡೆ ಮಾಸ್ಕ್ ಧರಿಸದೆ ಎಂದಿನಂತೆ ಸಾರ್ವಜನಿಕರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಅಲ್ಲಲ್ಲಿ ಗುಂಪುಗೂಡದಂತೆ ಸೂಚಿಸುತ್ತಿದ್ದರೂ ಯಾರೊಬ್ಬರೂ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಇದು ಕೇವಲ ಬೆಂಗಳೂರು ಮಾತ್ರವಲ್ಲದೆ ಅಧಿವೇಶನ ನಡೆಯುತ್ತಿರುವ ಸುವರ್ಣಸೌಧದಲ್ಲೂ ಇದೇ ದೃಶ್ಯ ಕಂಡುಬಂದವು.ಪ್ರಾಥಮಿಕ ಹಂತದಲ್ಲಿ ಜನರಿಗೆ ಸಮಸ್ಯೆಯಾಗದಂತೆ ಕೆಲ ಸರಳ ನಿಯಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊರಡಿಸಿವೆ. ರಾಜ್ಯದಲ್ಲಿ ಕೊರೊನಾ ನಿಯಮಗಳನ್ನು ಜನ ಇದಕ್ಕೆ ಕ್ಯಾರೇ ಎನ್ನುತ್ತಿಲ್ಲ.ಕಡ್ಡಾಯವಾಗಿ ಮಾಸ್ಕ್ ಧರಿಸಲು ಈಗಾಗಲೇ ಬಿಎಂಟಿಸಿ ಆದೇಶ ಹೊರಡಿಸಿದೆ. ನಿತ್ಯ ಬಸ್‍ಗಳಲ್ಲಿ ಲಕ್ಷಾಂತರ ಪ್ರಯಾಣಿಕರು ಸಂಚಾರ ಮಾಡುತ್ತಾರೆ.
ಪ್ರಯಾಣಿಕರು ಮಾಸ್ಕ್ ಹಾಕಿದರೂ ಬಸ್ ಸಿಬ್ಬಂದಿ ಹಾಕ್ತಿಲ್ಲ. ರಾಮನಗರದಲ್ಲೂ ಕೊರೊನಾ ನಿಮಾವಳಿಗಳನ್ನು ಜನ ಗಾಳಿ ತೂರಿದ್ದಾರೆ.ರಾಜ್ಯದಲ್ಲಿ ಕೊರೊನಾ ರೂಪಾಂತರಿ ಆತಂಕದ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ. ಆದರೆ ಸರ್ಕಾರದ ಆದೇಶಕ್ಕೆ ರಾಮನಗರ ಜನತೆಯೂ ನಿರ್ಲಕ್ಷ್ಯ ತೋರುತ್ತಿದ್ದಾರೆ.
ರಾಮನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರ ನಿರ್ಲಕ್ಷ್ಯ ತೋರಿದ್ದು ಸೋಂಕು ಹರಡುವ ಭೀತಿ ಎದುರಾಗಿದೆ.ಕೋವಿಡ್ ಹರಡದಂತೆ ಮುಂಜಾಗ್ರತಾ ತಡೆಗೆ ರಾಜ್ಯ ಸರ್ಕಾರ ಮಾಸ್ಕ್ ಕಡ್ಡಾಯಗೊಳಿಸಿ ಮಾರ್ಗಸೂಚಿ ಹೊರಡಿಸಿದ್ದರೂ ಕೋಟೆನಾಡು ಚಿತ್ರದುರ್ಗದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗಿದೆ.
ನಗರದ ತರಕಾರಿ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗಿದ್ದು ತರಕಾರಿ ವ್ಯಾಪಾರಿಗಳು, ಗ್ರಾಹಕರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತವರಿಲ್ಲದೆ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಜಾಗೃತಿ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.ಬಾಗಲಕೋಟೆ ವಲ್ಲಭಬಾಯಿ ವೃತ್ತದ ತರಕಾರಿ ಮಾರುಕಟ್ಟೆಯಲ್ಲಿ ಗ್ರಾಹಕರು ಹಾಗೂ ವ್ಯಾಪಾರಸ್ಥರು ಮಾಸ್ಕ್ ಧರಿಸದೆ ವ್ಯಾಪಾರಕ್ಕಿಳಿದ್ದಿದ್ದಾರೆ.
ಮಾಸ್ಕ್ ಧರಿಸದೇ ಜನರು ಮಾರುಕಟ್ಟೆಗೆ ಬರುತ್ತಿದ್ದಾರೆ. ಒಬ್ಬನೇ ಒಬ್ಬ ಮಾಸ್ಕ್ ಧರಿಸಿದ ವ್ಯಕ್ತಿ ಕಾಣುತ್ತಿಲ್ಲ. ಸಾಮಾಜಿಕ ಅಂತರವೂ ಇಲ್ಲದೆ, ಮಾಸ್ಕ್ ಧರಿಸದೆ ಜನ ಖರೀದಿಯಲ್ಲಿ ಮುಳುಗಿದ್ದಾರೆ.ಕಲಬುರಗಿ ಜಿಲ್ಲೆಯಲ್ಲೂ ಕೂಡ ಮಾರ್ಗಸೂಚಿ ಪಾಲಸದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಕಲಬುರಗಿ ನಗರದ ಕಣ್ಣಿ ಮಾರ್ಕೆಟ್‍ನಲ್ಲಿ ಮಾಸ್ಕ್ ಧರಿಸದೇ ವ್ಯಾಪಾರಸ್ಥರು ಮತ್ತು ಗ್ರಾಹಕರು ನಿರ್ಲಕ್ಷ್ಯವಹಿಸಿದ್ದಾರೆ.
ಇಷ್ಟೆಲ್ಲಾ ಆಗತ್ತಿದ್ದರೂ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಮಾಡುತ್ತಿಲ್ಲ.ಕಡಲತೀರಗಳಲ್ಲಿ ಮೋಜು ಮಸ್ತಿ:ಕಾರವಾರದಲ್ಲಿ ಸರ್ಕಾರದ ಕೋವಿಡ್ ರೂಲ್ಸ್‍ಗೆ ಬೆಲೆನೇ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಜನ ಓಡಾಡುತ್ತಿದ್ದಾರೆ.
ಕಾರವಾರ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ಕೋವಿಡ್ ರೂಲ್ಸ್ ಮಾಯವಾಗಿದೆ.ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಪ್ರವಾಸಿ ಸ್ಥಳಗಳಲ್ಲಿ ಕೋವಿಡ್ ನಿಯಮ ಪಾಲನೆಯಾಗುತ್ತಿಲ್ಲ.
ಹೊಸ ವರ್ಷ ಸಂಭ್ರಮಾಚರಣೆಗೆ ಬೇರೆ ಬೇರೆ ದೇಶಗಳಿಂದ, ರಾಜ್ಯಗಳಿಂದ ಬಂದಿರುವ ಪ್ರವಾಸಿಗರು ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮೋಜು ಮಸ್ತಿಯಲ್ಲಿ ಮುಳುಗಿ ಹೋಗಿದ್ದಾರೆ.