ಪೊಲೀಸ್

ಸರ್ಕಾರದ ಜತೆ ಚರ್ಚಿಸಿ ಮತ್ತೆ ಟೋಯಿಂಗ್ ಪುನರಾರಂಭ : ನೂತನ ಆಯುಕ್ತ ಪ್ರತಾಪ್ ರೆಡ್ಡಿ

Police Commissioner Pratap Reddy

ಜಾಗತಿಕ ಮನ್ನಣೆ ಪಡೆದ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿ ಪಾಲನೆ ತಮ್ಮ ಮೊದಲ ಆದ್ಯತೆಯಾಗಿದ್ದು, ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕಿ ಅಪರಾಧ ನಿಯಂತ್ರಣಕ್ಕೆ ಒತ್ತು ನೀಡಲಾಗುವುದು. ಪ್ರಮುಖ ಅಪರಾಧಗಳ ನಿಗಾವಣೆ ಘಟಕವನ್ನು ಪ್ರತಿ ವಿಭಾಗ ಮಟ್ಟದಲ್ಲಿ ಸ್ಥಾಪಿಸುವುದಾಗಿ ನೂತನ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು.ನಿರ್ಗಮಿತ ಆಯುಕ್ತ ಕಮಲ್‍ಪಂಥ್ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿರುವ 8 ವಿಭಾಗಗಳ ಮಟ್ಟದಲ್ಲೂ ಪ್ರಮುಖ ಅಪರಾಧ ನಿಗಾವಣೆ ಘಟಕಗಳನ್ನು ಸ್ಥಾಪಿಸಲಾಗುವುದು. ಅಪರಾಧಗಳ ತನಿಖೆ, ದೋಷಾರೋಪಣ ಪಟ್ಟಿ ಸಲ್ಲಿಕೆ, ಸಾಕ್ಷ್ಯ ಸಂಗ್ರಹ ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಈ ಘಟಕ ಜವಾಬ್ದಾರಿ ನಿರ್ವಹಿಸಲಿದೆ.

ಹಿರಿಯ ಅಧಿಕಾರಿಗಳು ಹಾಗೂ ತಜ್ಞರು ಘಟಕದಲ್ಲಿ ಕೆಲಸ ಮಾಡುತ್ತಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯಕ್ಕೆ ಅವಕಾಶ ಇರುವುದಿಲ್ಲ. ಅಪರಾಧಿಗಳಿಗೆ ಶೀಘ್ರ ಶಿಕ್ಷೆ ಕೊಡಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಮಹಿಳಾ ಸುರಕ್ಷತೆಗೆ ಹೆಚ್ಚಿನ ಗಮನ ನೀಡಲಾಗುವುದು. ಆ್ಯಸಿಡ್ ದಾಳಿ ಸೇರಿದಂತೆ ಗಂಭೀರ ಸ್ವರೂಪದ ಅಪರಾಧಗಳನ್ನು ಹತ್ತಿಕ್ಕಲು ಮತ್ತು ಅಪರಾಧಿಗಳಿಗೆ ಶೀಘ್ರವೇ ಶಿಕ್ಷೆ ಕೊಡಿಸಲು ತ್ವರಿತ ನ್ಯಾಯಾಲಯಗಳ ಸ್ಥಾಪನೆ ಕುರಿತು ಸರ್ಕಾರಗಳ ಜತೆ ಚರ್ಚಿಸುವುದಾಗಿ ತಿಳಿಸಿದರು.

ಬೆಂಗಳೂರಿಗೆ ಜಾಗತಿಕ ಮನ್ನಣೆ ಇದೆ. ವಿಶ್ವದ ಯಾವುದೇ ಭಾಗದಲ್ಲಾದರೂ ಬೆಂಗಳೂರಿನ ಹೆಸರು ಹೇಳಿದರೆ ಗುರುತಿಸ್ಪಡುತ್ತದೆ. ಐಟಿ-ಬಿಟಿ, ನವೋದ್ಯಮ ಸೇರಿದಂತೆ ಹಲವು ವಿಚಾರಗಳಿಂದ ಪ್ರಸಿದ್ಧಿಯಾಗಿರುವ ಉದ್ಯಾನ ನಗರಿಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಮತ್ತು ಶಾಂತಿ ಕಾಪಾಡುವುದು ಜವಾಬ್ದಾರಿಯುತ ಕೆಲಸ. ಈ ವಿಷಯವಾಗಿ ಕಾನ್‍ಸ್ಟೆಬಲ್‍ನಿಂದ ಕಮಿಷನ್ ವರೆಗೆ ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಈ ಹಿಂದಿನ ಆಯುಕ್ತ ಕಮಲ್‍ಪಂಥ್ ಅವರು ಪ್ರಾಮಾಣಿಕತೆ, ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಅವುಗಳನ್ನು ಮುಂದುವರೆಸುವ ಜತೆಗೆ ಹೊಸ ಸುಧಾರಣೆಗಳನ್ನೂ ಕೂಡ ಅಳವಡಿಸಿಕೊಳ್ಳಲಾಗುವುದು. ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ತಾವು ಕೂಡ ಈ ಹಿಂದೆ ಸೈಬರ್ ಅಪರಾಧಗಳ ವಿಭಾಗದಲ್ಲಿ ಕೆಲಸ ಮಾಡಿದ್ದು, ಸಾಕಷ್ಟು ಅನುಭವ ಇದೆ. ಮುಂದಿನ ದಿನಗಳಲ್ಲಿ ಇಂಟರ್‍ನೆಟ್ ಆಧಾರಿತ ಅಪರಾಧಗಳನ್ನು ನಿಗ್ರಹಿಸಲು ಮತ್ತು ಆರೋಪಿಗಳನ್ನು ಪತ್ತೆಹಚ್ಚಲು ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಅಗತ್ಯ ತಂತ್ರಜ್ಞಾನ, ತಾಂತ್ರಿಕತೆ ಮತ್ತು ತರಬೇತಿಯನ್ನು ಒದಗಿಸಲಾಗುವುದು ಎಂದರು.

ಸಂಚಾರ ದಟ್ಟಣೆ ನಿಯಂತ್ರಿಸಲು ಈಗಾಗಲೇ ಸಾಕಷ್ಟು ಪ್ರಯತ್ನಗಳು ನಡೆದಿವೆ. ಅನಧಿಕೃತ ಪಾರ್ಕಿಂಗ್ ಜಾಗದಲ್ಲಿ ನಿಂತಿದ್ದ ವಾಹನಗಳ ಟೋಯಿಂಗ್‍ನ್ನು ನಿಲ್ಲಿಸಲಾಗಿದೆ. ಸರ್ಕಾರದ ಜತೆ ಚರ್ಚಿಸಿ ಮತ್ತೆ ಟೋಯಿಂಗ್ ಶುರು ಮಾಡಲಾಗುವುದು. ಅನಧಿಕೃತವಾಗಿ ನಡೆಯುವ ಕ್ಲಬ್‍ಗಳು ಹಾಗೂ ಇತರ ಚಟುವಟಿಕೆಗಳ ವಿರುದ್ಧ ಮುಲಾಜಿಲ್ಲದೆ ಯಾವುದೇ ಒತ್ತಡಕ್ಕೆ ಮಣಿಯದೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಪ್ರತಿ ಪೊಲೀಸ್ ಠಾಣೆಯಲ್ಲೂ ಜನ ಸ್ನೇಹಿ ವ್ಯವಸ್ಥೆ ಜಾರಿಯಾಗಬೇಕು. ಅದಕ್ಕಾಗಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸ್ಪಷ್ಟ ಸೂಚನೆ ನೀಡುವುದಾಗಿ ಪ್ರತಾಪ್ ರೆಡ್ಡಿ ತಿಳಿಸಿದರು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button