ಸರಣಿ ಅಪಘಾತ ಗರ್ಭಾವಸ್ಥೆಯಲ್ಲಿದ್ದ ಮಗು ಸೇರಿ ಮೂವರು ಸಾವು

ಚಿಕ್ಕಬಳ್ಳಾಪುರದ ರಾಮದೇವರ ಗುಡಿ ಬಳಿ ರಾಷ್ಟ್ರೀಯ ಹೆದ್ದಾರಿ ೪೪ರಲ್ಲಿ ಇಂದು ಬೆಳಿಗ್ಗೆ ಸರಣಿ ಅಪಘಾತ ಸಂಭವಿಸಿ ಗರ್ಭಾವಸ್ಥೆಯಲ್ಲಿದ್ದ ಮಗು ಸೇರಿ ಮೂವರು ಮೃತಪಟ್ಟಿದ್ದಾರೆ.ಅಪಘಾತದಲ್ಲಿ ನಾಲ್ವರಿಗೆ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ನಿಂತಿದ್ದ ಬೈಕ್ ಕಾರುಗಳಿಗೆ ವೇಗವಾಗಿ ಬೆಳಿಗ್ಗೆ ೮ ರ ವೇಳೆ ಬಂದ ಕ್ಯಾಂಟರ್ ಡಿಕ್ಕಿ ಹೊಡೆದು ರಾಮದೇವರಗುಡಿಯ ಪ್ರಣವ್ ಹೋಟಲ್ ಗೆ ನುಗ್ಗಿದೆ. ಹೆದ್ದಾರಿಯಿಂದ ಹೋಟಲ್ ಗೆ ಕ್ಯಾಂಟರ್ ನುಗ್ಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಘಟನೆಯಲ್ಲಿ ಹೋಟಲ್ ಭದ್ರತಾ ಸಿಬ್ಬಂದಿ ನಾರಾಯಣಸ್ವಾಮಿ ಹಾಗೂ ಬೈಕ್ ಸವಾರ ಜನಾರ್ಧನ ಮೃತಪಟ್ಟಿದ್ದಾರೆ.
ಅಲ್ಲದೆ ಬಾಣಂತಿಗೆ ಗಂಭೀರ ಗಾಯಗಳಾಗಿದ್ದು, ಗರ್ಭಾವಸ್ಥೆಯಲ್ಲಿದ್ದ ಮಗು ಮೃತಪಟ್ಟಿದೆ. ಬಾಣಂತಿಯ ಮತ್ತೊಂದು ಮಗು ಬಚಾವ್ ಆಗಿದೆ.ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಡ್ಡ ಬಂದ ಕಾರು ತಪ್ಪಿಸಲು ಹೋಗಿ ಕ್ಯಾಂಟರ್ ಹೋಟಲ್ ಗೆ ನುಗ್ಗಿದೆ. ಹೋಟಲ್ ಮುಂದೆ ನಿಂತಿದ್ದ ಐದು ಕಾರುಗಳು ಜಖಂ ಆಗಿವೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್.ನಾಗೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕ್ಯಾಂಟರ್‌ನ್ನು ವಶಕ್ಕೆ ಪಡೆದು ಚಾಲಕ ಅಜೀತ್‌ನನ್ನು ಬಂಧಿಸಲಾಗಿದೆ.
ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಎಸ್ಪಿ ಡಿ.ಎಲ್.ನಾಗೇಶ್ ತಿಳಿಸಿದರು