ರಾಜ್ಯ

ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ನಾಮಪತ್ರ

ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಬಿಜೆಪಿಯ ಹಿರಿಯ ಸದಸ್ಯ ಹಾಗೂ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಇಂದು ವಿಧಾನಪರಿಷತ್ ಕಾರ್ಯದರ್ಶಿಗೆ ನಾಮಪತ್ರ ಸಲ್ಲಿಸಿದರು.

ಸಭಾಪತಿ ಚುನಾವಣೆಯಲ್ಲಿ ಕಾಂಗ್ರೆಸ್ ತಟಸ್ಥವಾಗಿದ್ದು, ಹೊರಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ , ಸಚಿವರಾದ ಜೆ.ಸಿ. ಮಾಧುಸ್ವಾಮಿ, ಗೋವಿಂದ ಕಾರಜೋಳ, ಸರ್ಕಾರದ ಮುಖ್ಯ ಸಚೇತಕ ವೈ.ಎನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರು ಹಾಜರಿದ್ದರು.

ನಾಳೆ ಮೇಲ್ಮನೆಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಆಡಳಿತಾರೂಢ ಬಿಜೆಪಿ ಸದಸ್ಯರು ಬಹುಮತ ಹೊಂದಿರುವುದರಿಂದ ಬಸವರಾಜ ಹೊರಟ್ಟಿ ಆಯ್ಕೆ ಬಹುತೇಕ ಖಚಿತವಾಗಿದೆ.ಪಕ್ಷಗಳ ಬಲಾಬಲ ನೋಡುವುದಾದರೆ ಆಡಳಿತರೂಢ ಬಿಜೆಪಿ 39, ಕಾಂಗ್ರೆಸ್ 26 ಹಾಗೂ ಜೆಡಿಎಸ್ 8 ಸ್ಥಾನಗಳನ್ನು ಹೊಂದಿವೆ.

ಒಬ್ಬರು ಪಕ್ಷೇತರ ಸದಸ್ಯರು ಸೇರಿದಂತೆ ಒಟ್ಟು 75 ಸದಸ್ಯರಿರುವ ವಿಧಾನಪರಿಷತ್‍ನಲ್ಲಿ ಸಭಾಪತಿಯಾಗಲು 38 ಸದಸ್ಯರ ಬೆಂಬಲ ಪಡೆಯಬೇಕು.ಸಭಾಪತಿ ಚುನಾವಣೆ ಹಿನ್ನೆಲೆಯಲ್ಲಿ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಬಿಜೆಪಿ ಪರಿಷತ್ ಸದಸ್ಯರು ಸಭೆ ನಡೆಸಿ ಸಭಾಪತಿ ಸ್ಥಾನಕ್ಕೆ ಬಿಜೆಪಿಯಿಂದ ಬಸವರಾಜ ಹೊರಟ್ಟಿ ಅವರು ಸ್ರ್ಪಧಿಸಲು ನಿರ್ಧರಿಸಲಾಗಿತ್ತು.

ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗುವ ಸಂದರ್ಭದಲ್ಲಿಯೇ ಬಸವರಾಜ್ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ನೀಡುವ ಕುರಿತು ಭರವಸೆ ನೀಡಲಾಗಿತ್ತು. ಆದರೆ ಆರಂಭದಲ್ಲಿ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ನೀಡಲು ವಿರೋಧ ವ್ಯಕ್ತವಾಗಿತ್ತು.

ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಅವರನ್ನು ಮುಂದುವರಿಸಬೇಕು ಎಂಬ ಬಿಜೆಪಿಯಲ್ಲಿ ಒತ್ತಡ ಕೇಳಿ ಬಂದಿತ್ತು.ಇದೀಗ ಬಸವರಾಜ್ ಹೊರಟ್ಟಿ ಅವರು ಹಿರಿಯ ಸದಸ್ಯರಾಗಿದ್ದು ಎರಡನೇ ಬಾರಿಗೆ ಸಭಾಪತಿ ಸ್ಥಾನ ಆಲಂಕರಿಸುವ ಸಾಧ್ಯತೆಗಳಿವೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button