ಸದ್ಯಕ್ಕೆ ೨ನೇ ಬೂಸ್ಟರ್ ಡೋಸ್ ಅಗತ್ಯವಿಲ್ಲ

ದೇಶದ ಕೋವಿಡ್ ಪರಿಸ್ಥಿತಿಯನ್ನು ಗಮನಿಸಿದರೆ ೨ನೇ ಬೂಸ್ಟರ್ ಡೋಸ್ ಲಸಿಕೆ ಪಡೆಯುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.ಚೀನಾ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚೆರಿಕೆ ಕ್ರಮವಾಗಿ ಕೇಂದ್ರ ಸರ್ಕಾರ ದೇಶವಾಸಿಗಳಿಗೆ ೨ನೇ ಬೂಸ್ಟರ್ ಡೋಸ್ ಲಸಿಕೆ ಕೊಡಲು ಚಿಂತನೆ ನಡೆಸಿದೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ೨ನೇ ಬೂಸ್ಟರ್ ಡೋಸ್ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ ಎಂದು ಮೂಲಗಳು ಹೇಳಿವೆ.
ದೇಶದಲ್ಲಿ ಮೊದಲ ಬೂಸ್ಟರ್ ಲಸಿಕಾ ಅಭಿಯಾನವನ್ನು ಸಂಪೂರ್ಣಗೊಳಿಸಬೇಕಿದೆ. ನಂತರ ೨ನೇ ಬೂಸ್ಟರ್ ಡೋಸ್ ಬಗ್ಗೆ ಗಮನ ಹರಿಸೋಣ ಎಂಬ ನಿಲುವಿಗೆ ಕೇಂದ್ರದ ಆರೋಗ್ಯ ಸಚಿವಾಲಯ ಬಂದಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಕೇಂದ್ರದ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ ೨೪ ಗಂಟೆಗಳಲ್ಲಿ ೧೩೪ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ೨೫೮೨ ಇದ್ದು, ೨ನೇ ಬೂಸ್ಟರ್ ಡೋಸ್ ಸದ್ಯಕ್ಕೆ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮೂಲಗಳು ಪ್ರತಿಪಾದಿಸಿವೆ.ದೇಶಾದ್ಯಂತ ಇದುವರೆಗೂ ೨೨೦.೧೧ ಕೋಟಿ ಕೋವಿಡ್ ಲಸಿಕೆ ವಿತರಿಸಲಾಗಿದೆ.
ಬಹುತೇಕ ಎಲ್ಲರೂ ೨ ಡೋಸ್ ಕೋವಿಡ್ ಲಸಿಕೆಯನ್ನು ತೆಗೆದುಕೊಂಡಿದ್ದಾರೆ. ಮೊದಲನೇ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುತ್ತಿದೆ. ಹೀಗಿರುವಾಗ ೨ನೇ ಬೂಸ್ಟರ್ ಡೋಸ್‌ನ ಅಗತ್ಯವಿಲ್ಲ. ಮೊದಲನೇ ಬೂಸ್ಟರ್ ಡೋಸ್ ಲಸಿಕೆಯನ್ನು ಹೆಚ್ಚಿಸಬೇಕಿದೆ.
ಈ ನಿಟ್ಟಿನಲ್ಲಿ ರಾಜ್ಯಗಳಿಗೆ ಸೂಚನೆ ನೀಡಿದೆ ಎನ್ನಲಾಗಿದೆ.ಮೊದಲನೆ ಬೂಸ್ಟರ್ ಡೋಸ್ ಲಸಿಕೆ ನೀಡಲು ಅಗತ್ಯ ಲಸಿಕೆಯನ್ನು ದಾಸ್ತಾನು ಮಾಡಿಕೊಳ್ಳುವಂತೆಯೂ ರಾಜ್ಯಗಳಿಗೆ ಸೂಚಿಸಿದೆ.ಮೊದಲನೆ ಬೂಸ್ಟರ್ ಡೋಸ್ ಲಸಿಕೆ ಪಡೆಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿ ೪ನೇ ಅಲೆಯ ಸೋಂಕನ್ನು ತಡೆಯಬಹುದಾಗಿದೆ.
೨ನೇ ಬೂಸ್ಟರ್ ಡೋಸ್ ಸದ್ಯಕ್ಕೆ ಬೇಕಿಲ್ಲ ಎಂಬ ನಿಲುವನ್ನು ತಜ್ಞರು ವ್ಯಕ್ತಪಡಿಸಿದ್ದು. ಇದಕ್ಕೆ ಕೇಂದ್ರ ಆರೋಗ್ಯ ಇಲಾಖೆ ಅಸ್ತು ಎಂದಿದೆ.