ರಾಜಕೀಯ

ಸಂಪುಟ ವಿಸ್ತರಣೆ ಮತ್ತೆ ಮುನ್ನೆಲೆಗೆ

ಪಕ್ಷದಲ್ಲಿ ಉಂಟಾಗಿರುವ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಕಸರತ್ತು ನಡೆಸಿದ್ದಾರೆ.ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾಗಿರುವ ೧೭ ಮಂದಿ ಶಾಸಕರ ಪೈಕಿ ಕೆಲವರಿಗೆ ಇನ್ನೂ ಮಂತ್ರಿ ಭಾಗ್ಯ ಲಭಿಸಿಲ್ಲ.

ಹಾಗೆಯೇ ಬಿಜೆಪಿಯಲ್ಲಿರುವ ಸಚಿವ ಸ್ಥಾನದ ಆಕಾಂಕ್ಷಿಗಳು ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿದ್ದು. ಇದೀಗ ಸಂಪುಟ ವಿಸ್ತರಣೆ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.

ಗುತ್ತಿಗೆದಾರ ಸಂತೋಷ್‌ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದು ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಈಶ್ವರಪ್ಪ ಕೂಡಾ ಅಸಮಾಧಾನಗೊಂಡಿದ್ದಾರೆ.ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮ ಹಾಗೂ ವಿಧಾನಮಂಡಲದ ಅಧಿವೇಶನದಲ್ಲಿ ಭಾಗವಹಿಸದೆ ದೂರ ಉಳಿದಿದ್ದಾರೆ. ಕಾಲು ನೋವಿನ ಕಾರಣದಿಂದಾಗಿ ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.

ಹೀಗಾಗಿ ಕಲಾಪದಲ್ಲಿ ಭಾಗವಹಿಸಿಲ್ಲ ಎಂದು ಹೇಳಿದ್ದರು.ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಮತ್ತೆ ಸಚಿವ ಸಂಪುಟ ವಿಸ್ತರಣೆ ಗರಿಗೆದರಿದೆ.ರಾಜ್ಯ ಬಿಜೆಪಿಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಮತ್ತೆ ಮಂತ್ರಿಯಾಗುವ ಕನಸು ಚಿಗುರೊಡೆದಿದೆ.

ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಸಚಿವ ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಆರ್.

ಶಂಕರ್ ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನ ಹೊರಹಾಕಿದ್ದು, ಕೊಟ್ಟ ಮಾತಿಗೆ ಬಿಜೆಪಿ ತಪ್ಪಿದೆ ಎಂದು ಹೇಳಿದ್ದರು.ಇದರ ಬೆನ್ನಲ್ಲೆ ಮತ್ತೊರ್ವ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ೧೭ ಮಂದಿ ಶಾಸಕರ ಪೈಕಿ ಕೆಲವರಿಗೆ ಅನ್ಯಾಯವಾಗಿದೆ.

ಕೂಡಲೇ ಆಗಿರುವ ಲೋಪವನ್ನು ಸರಿಪಡಿಸಬೇಕು ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದರು.ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರು ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿ, ಸೂಕ್ತ ಸಮಯದಲ್ಲಿ ಮಂತ್ರಿ ಮಂಡಲ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳುಗಳಷ್ಟೇ ಬಾಕಿ ಉಳಿದಿದ್ದು, ಸಚಿವ ಸಂಪುಟ ವಿಸ್ತರಣೆಯಾಗುತ್ತದೋ ಇಲ್ಲವೋ ಎಂಬ ಚಿಂತೆ ಸಚಿವ ಸ್ಥಾನದ ಆಕಾಂಕ್ಷಿಗಳನ್ನು ಕಾಡತೊಡಗಿದೆ.ಇದೀಗ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಗಳು ಸುಳಿವು ನೀಡಿದ್ದು, ಬಿಜೆಪಿ ಪಾಳ್ಯದಲ್ಲಿ ಮತ್ತೆ ಚಟುವಟಿಕೆಗಳು ಬಿರುಸುಗೊಂಡಿವೆ.

ಸಚಿವಾಕಾಂಕ್ಷಿಗಳು ತೆರೆಮರೆಯಲ್ಲಿ ಲಾಬಿ ನಡೆಸಿದ್ದಾರೆ.ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಬಗ್ಗೆ ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡುತ್ತಲೆ ಇದೆ.

ಇದರಿಂದ ಶಾಸಕರು ಕೂಡಾ ಬೇಸರಗೊಂಡಿದ್ದು, ಈ ಶಾಸಕರ ಅಸಮಾಧಾನಕ್ಕೆ ಬೊಮ್ಮಾಯಿ ಅವರು ಯಾವ ರೀತಿ ಮುಲಾಮು ಹಚ್ಚುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button