ರಾಜಕೀಯ

ಸಂಪುಟಕ್ಕೆ ಸೇರ್ಪಡೆ ಹೈಕಮಾಂಡ್‌ಗೆ ಬಿಟ್ಟದ್ದು

ಗುತ್ತಿಗೆದಾರ ಸಂತೋಷ್‌ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ನಾನು ಆರೋಪಮುಕ್ತನಾಗಿದ್ದೇನೆ. ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದು ಬಿಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ಮೈಸೂರಿನ ಚಾಮುಂಡಿಬೆಟ್ಟಕ್ಕೆ ಇಂದು ಬೆಳಿಗ್ಗೆ ಭೇಟಿ ನೀಡಿ ಚಾಮುಂಡೇಶ್ವರಿಯ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗುತ್ತಿಗೆದಾರ ಸಂತೋಷ್‌ಪಾಟೀಲ್ ಆತ್ಮಹತ್ಯೆ ಪ್ರಕರಣದಿಂದ ಆರೋಪಮುಕ್ತನಾಗಿ ಹೊರಬರುವ ವಿಶ್ವಾಸ ಮೊದಲ ದಿನದಿಂದಲೇ ಇತ್ತು. ನಾನು ತಪ್ಪು ಮಾಡಿರಲಿಲ್ಲ.

ಆದರೂ ಪಕ್ಷಕ್ಕೆ ಮುಜುಗರವಾಗಬಾರದು ಎಂದು ರಾಜೀನಾಮೆ ಕೊಟ್ಟಿದ್ದೆ. ಈಗ ಸಂಪೂರ್ಣ ಆರೋಪಮುಕ್ತನಾಗಿದ್ದೇನೆ. ಈಗ ಪಕ್ಷಕ್ಕೆ ಇದ್ದ ಮುಜುಗರ ನಿವಾರಣೆಯಾಗಿದೆ ಎಂದರು.ಸಂತೋಷ್‌ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿರುವ ಬಗ್ಗೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಟೀಕೆಮಾಡುತ್ತಿರುವುದು ಬೇಸರ ತರಿಸಿದೆ.

ಅವರೂ ಸಿಎಂ ಆಗಿದ್ದರು ತನಿಖೆಗಳು ಹೇಗೆ ನಡೆಯುತ್ತದೆ ಎಂದು ಗೊತ್ತಿದ್ದರೂ ಬಿ ರಿಪೋರ್ಟ್ ಬಗ್ಗೆ ಅನುಮಾನ ವ್ಯಕ್ತಪಡಿಸಿರುವುದು ಸರಿಯಲ್ಲ. ಸುಖಾಸುಮ್ಮನೆ ಇವರುಗಳು ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಜಾತಿ ಪಟ್ಟಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಸೇರಿ ಜಾತಿಯ ಕೆಸರು ಅಂಟಿಸಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ಸೇರಿ ಕಾಂಗ್ರೆಸ್‌ಗೆ ಜಾತಿಪಟ್ಟ ಅಂಟಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರನ್ನು ಒಳ್ಳೆಯ ನಾಯಕ ಅಂದುಕೊಂಡಿದ್ದೆ. ಆದರೆ ಅವರು ಮುಖ್ಯಮಂತ್ರಿಯಾಗಲು ಒಕ್ಕಲಿಗ ಸಮುದಾಯ ತನ್ನ ಬೆನ್ನಿಗೆ ಬರಬೇಕು ಎಂದು ಹೇಳುವ ಮೂಲಕ ಜಾತಿವಾದಿಯಾಗಿದ್ದಾರೆ ಎಂದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಕುರುಬರ ನಾಯಕ ಎಂದು ಹೇಳುವ ಮೂಲಕ ಅವರು ಜಾತಿವಾದಿ ಎಂಬುದು ಬಹಿರಂಗವಾಗಿದೆ.

ಈ ಇಬ್ಬರೂ ಸೇರಿ ಕಾಂಗ್ರೆಸ್‌ಗೆ ಜಾತಿಯ ಕೆಸರು ಅಂಟಿಸಿದ್ದಾರೆ ಎಂದರು.ಜಾತಿವಾದಿಗಳ ವಿಚಾರಕ್ಕೆ ಬಂದರೆ ಮಲ್ಲಿಕಾರ್ಜುನ ಖರ್ಗೆ ಮತ್ತು ಹರಿಪ್ರಸಾದ್‌ರವರನ್ನು ನಾನು ಮೆಚ್ಚುತ್ತೇನೆ. ಅವರಿಬ್ಬರೂ ಯಾವೊತ್ತೂ ಒಂದು ಸಮುದಾಯದ ನಾಯಕರಂತೆ ಬಿಂಬಿತವಾಗಿಲ್ಲ.

ಅವರಿಬ್ಬರೂ ಕಾಂಗ್ರೆಸ್‌ಗೆ ಗೌರವ ತರುವ ಮಾತುಗಳನ್ನಾಡಿದ್ದಾರೆ ಎಂದು ಹೊಗಳಿದರು.ಗಾಂಧಿ ಕುಟುಂಬದಿಂದ ಮೂರು ತಲೆಮಾರಿಗಾಗುವಷ್ಟು ಸಂಪತ್ತು ಮಾಡಿಕೊಂಡಿದ್ದೇವೆ ಎಂಬ ಶಾಸಕ ರಮೇಶ್‌ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಮೇಶ್‌ಕುಮಾರ್ ಹೇಳಿಕೆಯಿಂದ ಕಾಂಗ್ರೆಸ್‌ನ ಭ್ರಷ್ಟತನ ಬಯಲಾಗಿದೆ.

ಬಿಜೆಪಿ ಸರ್ಕಾರದ ಮೇಲೆ ಲಂಚದ ಆರೋಪದ ಕಾಂಗ್ರೆಸ್ಸಿಗರ ಬಂಡವಾಳ ಬಯಲಾಗಿದೆ. ಬಿಜೆಪಿ ಸಚಿವರುಗಳ ವಿರುದ್ಧ ಭ್ರಷ್ಟಾಚಾರದ ಒಂದು ಪ್ರಕರಣ ಇಲ್ಲದಿದ್ದರೂ ಕಾಂಗ್ರೆಸ್ ಯಾರೋ ಹೇಳಿದ ಹೇಳಿಕೆಯನ್ನು ಹಿಡಿದುಕೊಂಡು ಶೇ. ೪೦ ರಷ್ಟು ಲಂಚ ಆರೋಪ ಮಾಡುವುದು ಸರಿಯಲ್ಲ ಎಂದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button