ಶ್ರೀಶೈಲದಲ್ಲಿ ಮತ್ತೆ ಕನ್ನಡಿಗರ ಮೇಲೆ ಹಲ್ಲೆ, ಬಸ್‍ಗೆ ಕಲ್ಲು ತೂರಾಟ

ಯುಗಾದಿ ಸಂದರ್ಭದಲ್ಲಿ ಆಂಧ್ರದ ಶ್ರೀಶೈಲದಲ್ಲಿ ಕರ್ನಾಟಕದ ನಾನಾ ವಾಹನಗಳ ಮೇಲೆ ಕಲ್ಲು ತೂರಾಟ ಮತ್ತು ಕನ್ನಡಿಗರ ಮೇಲೆ ನಡೆದ ಹಲ್ಲೆ ಪ್ರಕರಣ ಮಾಸುವ ಮುನ್ನವೇ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ನ ಮೇಲೆ ಕಿಡಿಗೇಡಿಗಳುಕಲ್ಲು ತೂರಿ ಚಾಲಕ ಮತ್ತು ನಿರ್ವಾಹಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ರಾತ್ರಿ ನಡೆದಿದೆ.
ಆಂಧ್ರದ ಶ್ರೀಶೈಲ ಮಲ್ಲಿಕಾರ್ಜುನ ಕರ್ನಾಟಕದ ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನರ ಆರಾಧ್ಯದೈವ. ಅಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪ್ರತಿನಿತ್ಯ ತೆರಳುತ್ತಾರೆ.
ನಿನ್ನೆ ತಡರಾತ್ರಿ ಶ್ರೀಶೈಲದ ಬಸ್ ನಿಲ್ದಾಣದಲ್ಲಿ ಕರ್ನಾಟಕದ ವಿಜಯಪುರದ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಪರಿಣಾಮ ಬಸ್‍ನ ಗಾಜುಗಳು ಪುಡಿಪುಡಿಯಾಗಿವೆ.
ಇದೇ ವೇಳೆ ಬಸ್‍ನ ಕಿಟಕಿಯ ಗಾಜು ಒಡೆದು ಚಾಲಕ ಮತ್ತು ನಿರ್ವಾಹಕನ ಮೇಲೂ ಕೂಡ ಹಲ್ಲೆ ಮಾಡಲಾಗಿದೆ. ಚಾಲಕ ಬಸವರಾಜ್ ಬಿರಾದರ್ ಅವರ ಮುಖ ಮತ್ತು ಕಾಲಿಗೆ ಗಾಯವಾಗಿ ರಕ್ತಸ್ರಾವವಾಗಿದೆ.
ಇವರ ಚೀರಾಟ ಕೇಳಿ ಇತರೆ ಬಸ್‍ಗಳ ಚಾಲಕರು ಹಾಗೂ ನಿರ್ವಾಹಕರು ಓಡಿಬಂದಿದ್ದಾರೆ.ಇದನ್ನು ಗಮನಿಸಿದ ಪುಂಡರ ಗುಂಪು ಅಲ್ಲಿಂದ ಕಾಲ್ಕಿತ್ತಿವೆ.
10-12 ಜನರಿದ್ದ ಪುಂಡರ ಗುಂಪು ಏಕಾಏಕಿ ಹಲ್ಲೆ ನಡೆಸಿದ್ದಲ್ಲದೆ ಕನ್ನಡಿಗರ ಬಗ್ಗೆ ಅಶ್ಲೀಲವಾಗಿ ಬೈದು ದುಂಡಾವರ್ತನೆ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.ಈ ಕುರಿತು ಶ್ರೀಶೈಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ ಮಾರ್ಚ್ 31ರಂದು ಯುಗಾದಿ ಸಂದರ್ಭದಲ್ಲಿ ಕರ್ನಾಟಕದ ನಾನಾ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಕನ್ನಡಿಗರ ಮೇಲೆ ಹಲ್ಲೆ ನಡೆಸಲಾಗಿತ್ತು.ಈ ಸಂದರ್ಭದಲ್ಲಿ ಹಲವರು ಗಾಯಗೊಂಡು ಹಲವು ವಾಹನಗಳು ಜಖಂಗೊಂಡಿದ್ದವು.
ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಮಾರಣಾಂತಿಕ ಹಲ್ಲೆಯ ಘಟನೆ ಶ್ರೀಶೈಲದಲ್ಲಿ ನಡೆದಿರುವುದು ಕನ್ನಡಿಗರ ಸುರಕ್ಷತೆಯ ಬಗ್ಗೆ ಆತಂಕ ಎದುರಾಗಿದೆ.