ಶಿವಮೊಗ್ಗ ಮತ್ತೆ ಉದ್ರಿಕ್ತ

ಶಿವಮೊಗ್ಗದಲ್ಲಿ ಕೆಲ ತಿಂಗಳ ಹಿಂದೆ ಹತ್ಯೆಯಾಗಿದ್ದ ಹರ್ಷ ಕುಟುಂಬಸ್ಥರಿಗೆ ನಿನ್ನೆ ತಡರಾತ್ರಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದ ದುಷ್ಕರ್ಮಿಗಳು, ಬೆದರಿಕೆ ಹಾಕಿ, ಓರ್ವ ಯುವಕನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಯುವಕನೊಬ್ಬನ ಹತ್ಯೆಯೂ ನಡೆದಿದೆ. ಇದರಿಂದ ಶಾಂತವಾಗಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಶಿವಮೊಗ್ಗದಲ್ಲಿರುವ ಹರ್ಷ ಕುಟುಂಬ ವಾಸಿಸುತ್ತಿರುವ ಸೀಗೆಹಟ್ಟಿಯ ಮನೆಯ ಬಳಿ ಮಾರಾಕಾಸ್ತ್ರ ಹಿಡಿದು ಬಂದ ದುಷ್ಕರ್ಮಿಗಳು, ಹರ್ಷನ ಸಹೋದರಿ ಹಾಗೂ ಕುಟುಂಬಸ್ಥರಿಗೆ ಜೀವ ಬೆದರಿಕೆ ಹಾಕಿದ್ದು, ಸ್ಥಳೀಯ ಪ್ರಕಾಶ್ ಎಂಬ ಯುವಕನ ಮೇಲೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಹಾಗೆಯೇ ಯುವಕನೊಬ್ಬನ ಹತ್ಯೆ ನಡೆದಿದ್ದು, ಮೂರು ಪ್ರಕರಣಗಳು ಬೇರೆ ಬೇರೆಯಾಗಿವೆ ಎಂದು ಜಿಲ್ಲಾ ಎಸ್ಪಿ ಮಿಥುನ್‌ಕುಮಾರ್ ತಿಳಿಸಿದ್ದಾರೆ.
ಸ್ಥಳೀಯರು ದುಷ್ಕರ್ಮಿಗಳ ಬೆನ್ನಟ್ಟಿ ಹಿಡಿಯಲು ಮುಂದಾದಾಗ ಇವರೆಲ್ಲ ಸ್ಥಳದಿಂದ ಪರಾರಿಯಾಗಿದ್ದು, ಗಾಯಾಳು ಪ್ರಕಾಶ್‌ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ. ಇದರಿಂದಾಗಿ ಶಾಂತವಾಗಿದ್ದ ಜಿಲ್ಲೆಯಲ್ಲಿ ಮತ್ತೆ ಪ್ರಕ್ಷುಬ್ಧ ವಾತಾವರಣಕ್ಕೆ ನಇರ್ಮಾಣವಾಗಿದೆ.ದುಷ್ಕರ್ಮಿಗಳು ಸೀಗೆಹಟ್ಟಿ ರವಿವರ್ಮ ಬೀದಿ, ಬರಮಪ್ಪ ಕೆಆರ್‌ಪುರ ಮುಂತಾದ ರಸ್ತೆಗಳಲ್ಲಿ ೨ ಬೈಕ್‌ಗಳಲ್ಲಿ ೬ ಮಂದಿ ಅನ್ಯಕೋಮಿನ ಯುವಕರು ಮಚ್ಚು, ಲಾಂಗ್ ಹಿಡಿದು ಕೂಗಾಡುತ್ತ ಭಯ ಹುಟ್ಟಿಸಿದ್ದು, ಮುಸ್ಲಿಂ ಪರ ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಸೀಗೆಹಟ್ಟಿ ಭಾಗದಲ್ಲಿ ಜನ ಗುಂಪುಗೂಡಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದು, ಎಸ್‌ಪಿ ಮಿಥುನ್ ಕುಮಾರ್ ಅವರು ಭೇಟಿ ನೀಡಿ ಭದ್ರತೆ ನಿಗಾ ವಹಿಸಿದ್ದಾರೆ.ಹಿಜಾಬ್ ವಿವಾದ ಭುಗಿಲೆದ್ದ ಸಂದರ್ಭದಲ್ಲೇ ಹರ್ಷನ ಕೊಲೆಯಾಗಿತ್ತು.
ಈ ಕೊಲೆ ಶಿವಮೊಗ್ಗದಲ್ಲಿ ಗಲಭೆಗೆ ಕಾರಣವಾಗಿ ಇಡೀ ಶಿವಮೊಗ್ಗ ಹತ್ತಿ ಹುರಿದಿತ್ತು. ಮಾಮೂಲಿನ ಪರಿಸ್ಥಿತಿಗೆ ಶಿವಮೊಗ್ಗ ಬರಲು ಬಹಳ ಕಾಲ ಹಿಡಿದಿತ್ತು. ಎಲ್ಲವೂ ಮುಗಿದು ಶಾಂತ ಸ್ಥಿತಿಗೆ ಮರಳಿದ್ದ ಜಿಲ್ಲೆಯಲ್ಲಿ ಈಗ ಈ ಘಟನೆಯಿಂದ ಮತ್ತೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದೆ. ಯಾವಾಗ ಏನೋ ಎಂಬ ಆತಂಕ ಎಲ್ಲರಲ್ಲಿ ಮನೆ ಮಾಡಿದೆ.
ಹರ್ಷ ಮನೆಗೆ ಬಿಗಿ ಭದ್ರತೆದುಷ್ಕರ್ಮಿಗಳು ಹತ್ಯೆಯಾದ ಹರ್ಷನ ಕುಟುಂಬಸ್ಥರಿಗೆ ಬೆದರಿಕೆ ಹಾಕಿರುವ ಬೆನ್ನಲೆ ಪೊಲೀಸರು ಹರ್ಷನ ಮನೆಗೆ ಪೊಲೀಸರ ಭದ್ರತೆ ಒದಗಿಸಲಾಗಿದ್ದು, ಅವರ ಮನೆಗೆ ಖಾಕಿ ಕಾವಲು ಹಾಕಲಾಗಿದೆ.ಮುಂಜಾಗ್ರತಾ ಕ್ರಮವಾಗಿ ಸೀಗೆ ಹಟ್ಟಿಗ್ರಾಮದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
ಸೂಕ್ತ ರಕ್ಷಣೆಗೆ ಆಗ್ರಹ:ದುಷ್ಕರ್ಮಿಗಳಿಂದ ಭಯ ಹುಟ್ಟಿಸುವ ಕೃತ್ಯದ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ನಮಗೆ ಸೂಕ್ತ ರಕ್ಷಣೆ ಬೇಕು ಎಂದು ಹಿಂದೂ ಕಾರ್ಯಕರ್ತ ದಿ. ಹರ್ಷ ಸಹೋದರಿ ಅಶ್ವಿನಿ ಆಗ್ರಹಿಸಿದ್ದಾರೆ.ಹರ್ಷ ತಾಯಿ ಪದ್ಮಾವತಿ ಹಾಗೂ ಹರ್ಷ ಸಹೋದರಿ ಅಶ್ವಿನಿ ಮಾತನಾಡಿ, ರಾತ್ರಿ ೧೧.೧೫ ರ ಸಮಯಕ್ಕೆ ೩-೪ ಬೈಕ್ ನಲ್ಲಿ ಯುವಕರು ಬಂದಿದ್ದರು.
ಮಾರಕಾಸ್ತ್ರ ಹಿಡಿದುಕೊಂಡು ಓಡಾಡುತ್ತಿದ್ದರು ಎಂದು ಹೇಳಿದರು.ಕಠಿಣ ಶಿಕ್ಷೆಗೆ ಒತ್ತಾಯ:ಹರ್ಷನ ತೆಗೆದಿದ್ದು ಸಾಲದಾ, ನಿಮ್ಮನ್ನೂ ತೆಗೆಯಬೇಕಾ. ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಯುವಕರ ಗುಂಪು ಅವಾಜ್ ಹಾಕಿದ್ದಾರೆ. ಇನ್ನು ಎಷ್ಟು ಮಂದಿ ಹಿಂದೂ ಯುವಕರ ಬಲಿಯಾಗಬೇಕು..?. ನನ್ನ ಸಹೋದರ ಹರ್ಷ ಹೋದ,ಪ್ರವೀಣ್ ನೆಟ್ಟಾರ್ ಹೋದ.
ಆದರೂ ಅವರ ದಾಹ ಇನ್ನೂ ತೀರಿಲ್ಲ. ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ನಮಗೆ ಸೂಕ್ತ ರಕ್ಷಣೆ ಕೊಡಬೇಕು ಎಂದು ತಿಳಿಸಿದರು.ಕಲ್ಲಿನಿಂದ ಹಲ್ಲೆಶಿವಮೊಗ್ಗದಲ್ಲಿ ಮುಸುಕುಧಾರಿ ದುಷ್ಕರ್ಮಿಗಳು ಪ್ರಕಾಶ್ (೩೦) ಎಂಬಾತನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ.
ನಿನ್ನೆ ರಾತ್ರಿ ಬರಮಪ್ಪ ನಗರದ ನಿವಾಸಿ ಪ್ರಕಾಶ್ ಸ್ನೇಹಿತರ ಜತೆ ಬಸ್‌ಸ್ಟಾಂಡ್‌ಗೆ ಹೋಗಿ ಮತ್ತೆ ವಾಪಸ್ ಆಟೋದಲ್ಲಿ ಮನೆಗೆ ಬಂದಿದ್ದಾರೆ.ಸ್ನೇಹಿತರು ಪ್ರಕಾಶ್‌ನನ್ನು ಆಟೋದಿಂದ ಇಳಿಸಿ ಮುಂದೆ ಹೋಗುತ್ತಿದ್ದಂತೆಯೇ ಏಕಾಏಕಿ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಪ್ರಕಾಶ್ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಪ್ರಕಾಶ್ ಕೆಳಗಿ ಬಿದ್ದಿದ್ದು, ಮೂವರು ಕಾಲಿನಿಂದ ತುಳಿದಿದ್ದಾರೆ.
ಅವರಿಂದ ತಪ್ಪಿಸಿಕೊಂಡು ಪ್ರಕಾಶ್ ಮನೆಗೆ ಓಡಿದ್ದು, ಪ್ರಕಾಶನ ಕೂಗಾಟ ಕೇಳಿ ಮನೆಯವರು ಬಾಗೊಲು ತೆಗೆದಿದ್ದಾರೆ ಇದನ್ನು ನೋಡಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗಾಯಗೊಂಡಿರುವ ಪ್ರಕಾಶ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಂಘಟನೆಗೂ ನನಗೂ ಸಂಬಂಧವಿಲ್ಲನಾನು ಯಾವುದೇ ಸಂಘಟನೆಗೆ ಸೇರಿದವನಲ್ಲ, ಆರ್‌ಎಸ್‌ಎಸ್ ಪಥ ಸಂಚಲನವನ್ನು ನೋಡಲು ಹೋಗಿದ್ದು ಬಿಟ್ಟರೆ ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಮನೆಯ ಬಳಿಯೇ ಕುಲುಮೆ ಕೆಲಸ ಮಾಡಿಕೊಂಡಿದ್ದವನು. ನನ್ನ ಮೇಲೆ ಯಾಕೆ ಹಲ್ಲೆ ನಡೆಸಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ಪ್ರಕಾಶ್ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ಸೀಗೆಹಟ್ಟಿ ಮತ್ತು ಬರಮಪ್ಪ ಹಟ್ಟಿ ಭಾಗದಲ್ಲಿ ಓಡಾಡಿ ಕೂಗಾಡಿ ತೆರಳಿದ್ದಾರೆ. ಈಗ ಈ ಭಾಗದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.ವಿಜಯ್ ಎಂಬ ಯುವಕನ ಹತ್ಯೆಶಿವಮೊಗ್ಗದ ವೆಂಕಟೇಶ್ ನಗರದ ನಡು ರಸ್ತೆಯಲ್ಲೇ ವಿಜಯ್ ಎಂಬ ಯುವಕನನ್ನು ಹತ್ಯೆ ಮಾಡಲಾಗಿದ್ದು, ಈತ ಆಸ್ಪತ್ರೆಯೊಂದರ ಅಕೌಂಟ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ.
ಈ ಘಟನೆ ಕುರಿತು ಎಸ್ಪಿ ಮಿಥುನ್‌ಕುಮಾರ್ ಮಾಹಿತಿ ನೀಡಿ ಮೃತ ವ್ಯಕ್ತಿ ರಾತ್ರಿ ೧.೩೦ರ ರವೆರಗೂ ಮನೆಯಲ್ಲೇ ಇದ್ದ, ನಂತರ ಈತನಿಗೆ ದೂರವಾಣಿ ಕರೆ ಬರುತ್ತೆ. ಆಗ ವಿಜಯ್ ತಂದೆಗೆ ಕೆಲಸ ನಿಮಿತ್ತ ಹೊರಗೆ ಹೋಗುತ್ತಿರುವುದಾಗಿ ಹೇಳಿ ಮನೆಯಿಂದ ಹೊರ ಬರುತ್ತಾನೆ.
ಮೂರು ಗಂಟೆ ಸುಮಾರಿಗೆ ಹತ್ಯೆ ನಡೆದಿದೆ. ಸ್ಥಳದ ಸಿಸಿ ಟಿವಿ ದೃಶ್ಯಗಳು ಲಭ್ಯವಾಗಿದೆ. ತನಿಖೆ ನಡೆದಿದೆ ಎಂದು ಅವರು ತಿಳಿಸಿ ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಿದ್ದಾರೆ.