ಶಿವಮೊಗ್ಗ: ನಾಲ್ಕು ವರ್ಷವಾದರೂ ನಿರ್ಮಾಣವಾಗದ ಕುಂಟೇಹಳ್ಳ ಸೇತುವೆ, ತಪ್ಪದ ಜನರ ಪರದಾಟ

ಮಲೆನಾಡಿನ ಕುಗ್ರಾಮಗಳ ಸಂಪರ್ಕದ ಪ್ರಮುಖ ಸೇತುವೆಗಳ ದುರಸ್ತಿಗೆ ಸರಕಾರ ನಿಗಾ ವಹಿಸದ ಪರಿಣಾಮ ಸಾರ್ವಜನಿಕರು ಪರದಾಡುವಂತಹ ದುಸ್ಥಿತಿಗೆ ಮುಕ್ತಿಯೇ ಸಿಗದಂತಾಗಿದೆ. ತೀರ್ಥಹಳ್ಳಿ ತಾಲೂಕಿನ ಬಹುತೇಕ ಕುಗ್ರಾಮಗಳಲ್ಲಿ ಕುಸಿದ ಸೇತುವೆ ದುರಸ್ತಿಯನ್ನೂ ಮಾಡುತ್ತಿಲ್ಲ.
2018ರಲ್ಲಿ ಬೀಸಿದ ಭಾರಿ ಗಾಳಿ, ಮಳೆಗೆ ಕುಸಿತಗೊಂಡ ತೂದೂರು ಗ್ರಾ.ಪಂ. ವ್ಯಾಪ್ತಿಯ ಬೈಲುಬಡಿಗೆ-ಹಿರೇಬೈಲು ಸಂಪರ್ಕದ ಕುಂಟೇಹಳ್ಳ ಸೇತುವೆ ಈವರೆಗೂ ಅದೇ ದುಸ್ಥಿತಿಯಲ್ಲೇ ಕಾಲ ತಳ್ಳುತ್ತಿದೆ.
ಜನಪ್ರತಿನಿಧಿಗಳು, ಅಧಿಕಾರಿಗಳು ಕುಸಿದ ಬೈಲುಬಡಿಗೆ ಸೇತುವೆ ಸ್ಥಳಕ್ಕೆ ಭೇಟಿ ನೀಡಿ ತುರ್ತಾಗಿ ಸೇತುವೆ ಕಾಮಗಾರಿ ಅನುಷ್ಠಾನದ ಭರವಸೆ ನೀಡಿದ್ದರು.
2 ವರ್ಷದ ನಂತರ ಸೇತುವೆ ನಿರ್ಮಾಣಕ್ಕೆ ಕರ್ನಾಟಕ ನೀರಾವರಿ ನಿಗಮದಿಂದ ಸರಕಾರ 3 ಕೋಟಿ ರೂ. ಅನುದಾನ ಮಂಜೂರಾಗಿದ್ದರೂ ಇನ್ನೂ ಸೇತುವೆ ಕಾಮಗಾರಿ ಆರಂಭವಾಗಿಲ್ಲ.
ಸರಕಾರದ ಹಣ, ಜನಪ್ರತಿನಿಧಿಗಳ ಭರವಸೆ ನಂಬಿದ ಸೇತುವೆ ಸಂಪರ್ಕದ ಗ್ರಾಮಗಳ ಜನರು ನಿರಾಸೆಗೊಂಡಿದ್ದಾರೆ. ಸರಕಾರದ ನಿರ್ಲಕ್ಷ್ಯ, ಇಲಾಖೆ ಬೇಜವಾಬ್ದಾರಿ ಜನರಲ್ಲಿ ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿದೆ.
ಶಿವಮೊಗ್ಗ- ತೀರ್ಥಹಳ್ಳಿ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 169 ಮಾರ್ಗ ಸಂಪರ್ಕದಿಂದ ಕೇವಲ 4 ಕಿ.ಮೀ. ದೂರದಲ್ಲಿ ಬೈಲುಬಡಿಗೆ- ಹಿರೇಬೈಲು ಸೇತುವೆ ಸ್ಥಳ ಇದೆ. ಹತ್ತಿರದ ಸಂಪರ್ಕ ಇದ್ದರೂ ಕುಸಿದ ಸೇತುವೆಯಲ್ಲಿ ಸಂಚಾರ ಸಾಧ್ಯವಿಲ್ಲದೆ ಸುಮಾರು 15 ಕಿ.ಮೀ. ಸುತ್ತಿ ಪ್ರಮುಖ ಮಾರ್ಗ ಸಂಪರ್ಕಿಸುವ ಅನಿವಾರ್ಯತೆ ಎದುರಾಗಿದೆ.
ಕುಸಿದು ಸೇತುವೆ ಮಾರ್ಗದಲ್ಲಿ ಕಿರುವಾಹನ ಸಂಚರಿಸದಂತಹ ಸನ್ನಿವೇಶ ಇದೆ. 2018 ಆಗಸ್ಟ್ 2 ನೇ ವಾರದಲ್ಲಿ ಸುರಿದ ಭಾರಿ ಮಳೆಗೆ ಸೇತುವೆ ಕುಸಿದಿತ್ತು. ಸ್ಥಳಕ್ಕೆ ಆಗ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಆರಗಜ್ಞಾನೇಂದ್ರ ಭೇಟಿ ನೀಡಿ ಜರೂರಾಗಿ ಸೇತುವೆ ನಿರ್ಮಿಸುವ ಭರವಸೆ ನೀಡಿದ್ದರು.
ಆದರೆ, ಕೊರೊನಾ ನೆಪದಲ್ಲಿ ಅನುದಾನ ಬಿಡುಗಡೆಗೆ ಸರಕಾರ ಆಸಕ್ತಿ ತೋರಲಿಲ್ಲ. 2020ರ ಕೊನೆಯಲ್ಲಿ ಸೇತುವೆ ನಿರ್ಮಾಣಕ್ಕೆ ಕರ್ನಾಟಕ ನೀರಾವರಿ ನಿಗಮದಿಂದ 3 ಕೋಟಿ ರೂ. ಅನುದಾನ ಮಂಜೂರು ಮಾಡಿದ ನಂತರವೂ ಕಾಮಗಾರಿ ಅನುಷ್ಠಾನ ಮಾತ್ರ ಜರೂರಾಗಿ ಆಗಲೇ ಇಲ್ಲ.
ಇನ್ನು ಕರ್ನಾಟಕ ನೀರಾವರಿ ನಿಗಮ ಸುಮಾರು 8 ತಿಂಗಳ ಹಿಂದೆ ಸೇತುವೆ ಕಾಮಗಾರಿಗೆ ಮೊದಲ ಬಾರಿಗೆ ಟೆಂಡರ್ ಆಹ್ವಾನಿಸಿದೆ. ನಿಯಮಗಳ ಅನ್ವಯ ಒಬ್ಬನೇ ಗುತ್ತಿಗೆದಾರ ಸಲ್ಲಿಸಿದ ಟೆಂಡರ್‌ಗೆ ಅನುಮತಿ ಸಾಧ್ಯವಿಲ್ಲ ಎಂಬ ಕಾರಣಕ್ಕೆ 2ನೇ ಬಾರಿ ಟೆಂಡರ್ ಆಹ್ವಾನಿಸಿದೆ. ಈಗಲೂ ಬೆಳಗಾವಿ ಮೂಲದ ಗುತ್ತಿಗೆದಾರ ಟೆಂಡರ್ ಸಲ್ಲಿಸಿದ್ದು, ಕಾಮಗಾರಿಗೆ ಅನುಮತಿ ನೀಡಬೇಕೋ ಇಲ್ಲವೋ ಎಂಬ ಗೊಂದಲ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಎದುರಾಗಿದೆ. ಈಗ ನಿಯಮಗಳನ್ನು ಪ್ರಸ್ತಾಪಿಸಿ ಅನುಷ್ಠಾನದಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. 4 ವರ್ಷದ ಹಿಂದೆ ಸರಕಾರ ತುರ್ತು ಕಾಮಗಾರಿ ಭರವಸೆ ನೀಡಿದೆ. ಈಗ ನೀರಾವರಿ ನಿಗಮ ನಿಯಮಗಳ ನೆಪ ಮುಂದಿಡುತ್ತಿರುವುದು ಗ್ರಾಮಸ್ಥರನ್ನು ರೊಚ್ಚಿಗೆಬ್ಬಿಸಿದೆ.
ಬೈಲುಬಡಿಗೆ ಸೇತುವೆ ಕಾಮಗಾರಿ ಕುರಿತು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ನಿಯಮಗಳ ಪಾಲನೆ ಅನಿವಾರ‍್ಯವಾಗಿರುವ ಹಿನ್ನೆಲೆಯಲ್ಲಿಕಾಮಗಾರಿ ತುರ್ತಾಗಿ ಅನುಷ್ಠಾನ ಸಾಧ್ಯವಾಗಿಲ್ಲ. ಮಳೆ ಮುಕ್ತಾಯದ ನಂತರ ಕಾಮಗಾರಿ ಆರಂಭವಾಗಬಹುದು ಎಂದು ಕರ್ನಾಟಕ ನೀರಾವರಿ ನಿಗಮ ಎಇ ಜಗದೀಶ್ ತಿಳಿಸಿದ್ರು.