Uncategorized

ಶಿವಮೊಗ್ಗದಲ್ಲಿ ಮೊಟ್ಟಮೊದಲ ‘ಚಿಟ್ಟೆ ಪಾರ್ಕ್’ ಸಿದ್ಧವಾಗುತ್ತಿದೆ

ಶಿವಮೊಗ್ಗದಲ್ಲಿ ಮೊಟ್ಟಮೊದಲ ‘ಚಿಟ್ಟೆ ಪಾರ್ಕ್’ ಸಿದ್ಧವಾಗುತ್ತಿದೆ. ಇಲ್ಲಿ ಬಗೆಬಗೆಯ ಚಿಟ್ಟೆಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಲಭಿಸಲಿದೆ. ಅಂದುಕೊಂಡಂತೆ ಆದರೆ ಕೆಲವೆ ಸಮಯದಲ್ಲಿ ಬಣ್ಣ ಬಣ್ಣದ ಪಾತರಗಿತ್ತಿಗಳು ನೋಡುವ ಅದೃಷ್ಟ ಒಲಿಯಲಿದೆ.

ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಚಿಟ್ಟೆ ಪಾರ್ಕ್ ರೆಡಿಯಾಗುತ್ತಿದೆ. ಪ್ರವಾಸಿಗರನ್ನು ಸೆಳೆಯಲು ಮತ್ತು ಅವರ ಮನಸಿಗೆ ಮುದ ನೀಡುವ ಸಲುವಾಗಿ ಈ ಚಿಟ್ಟೆ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಬೃಹತ್ ಚಿಟ್ಟೆ ಪಾರ್ಕ್ ಸ್ಥಾಪಿಸಲಾಗಿದೆ. ಅಲ್ಲಿರುವುದು ಒಳಾಂಗಣ ಪಾರ್ಕ್. ಕಟ್ಟಡವೊಂದರಲ್ಲಿ ಚಿಟ್ಟೆಗಳನ್ನು ಸ್ವಚ್ಛಂದವಾಗಿ ವಿಹರಿಸಲು ವ್ಯವಸ್ಥೆ ಮಾಡಲಾಗಿದೆ. ಆದರೆ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಹೊರಾಂಗಣ ಚಿಟ್ಟೆ ಪಾರ್ಕ್ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಸ್ಥಳವನ್ನು ನಿಗದಿಪಡಿಸಿ, ಅಭಿವೃದ್ಧಿಪಡಿಸಲಾಗುತ್ತಿದೆ. ಸಫಾರಿಯ ಕ್ಯಾಂಟೀನ್ ಪಕ್ಕದಲ್ಲಿ ಖಾಲಿ ಜಾಗವಿತ್ತು. ಇದನ್ನು ಚಿಟ್ಟೆ ಪಾರ್ಕ್’ಗೆ ಮೀಸಲಿಡಲಾಗಿದೆ. ಈಗಾಗಲೇ ಆ ಜಾಗವನ್ನ ಅಭಿವೃದ್ಧಿಪಡಿಸಲಾಗುತ್ತಿದೆ. ಕೆಲವೆ ತಿಂಗಳಲ್ಲಿ ಇಲ್ಲಿ ಕಣ್ಣಿಗೆ ಮುದ ನೀಡುವ ಬಣ್ಣ ಬಣ್ಣದ ಚಿಟ್ಟೆಗಳು ರೆಕ್ಕೆ ಬಡಿಯುತ್ತ ಹಾರುವುದನ್ನು ಕಾಣಬಹುದಾಗಿದೆ.

ಚಿಟ್ಟೆಗಳನ್ನು ಸೆಳೆಯುವ ಹೂವಿನ ಗಿಡಗಳು

ಚೆಟ್ಟೆಗಳನ್ನು ಹಾರುವ ಹೂವುಗಳೆಂದೆ ಬಣ್ಣಿಸಲಾಗುತ್ತದೆ. ಪ್ರಕೃತಿಯ ಸಮತೋಲನದ ವಿಚಾರದಲ್ಲಿ ಇವುಗಳದ್ದು ಪ್ರಮುಖ ಪಾತ್ರ. ಆದರೆ ಇವು ಅತ್ಯಂತ ಸೂಕ್ಷ್ಮ ಜೀವಿಗಳು. ಇದೆ ಕಾರಣಕ್ಕೆ ಎಲ್ಲೆಂದರಲ್ಲಿ ಚಿಟ್ಟೆ ಪಾರ್ಕ್ ಸ್ಥಾಪನೆ ಮಾಡಲು ಸಾಧ್ಯವಾಗುವುದಿಲ್ಲ. ಸೂರ್ಯನ ಬೆಳಕು ಮತ್ತು ಗಾಳಿ ವ್ಯವಸ್ಥೆ ಉತ್ತಮವಾಗಿರಬೇಕು. ಚಿಟ್ಟೆಗಳನ್ನು ಆಕರ್ಷಿಸುವ ಸಸ್ಯೆಗಳನ್ನು ನೆಡಬೇಕಾಗುತ್ತದೆ. ಇದೆಲ್ಲವನ್ನು ಸೂಕ್ಷ್ಮವಾಗಿ ಅವಲೋಕಿಸಿ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಚಿಟ್ಟೆ ಪಾರ್ಕ್ ಸಿದ್ಧಪಡಿಸಲಾಗುತ್ತಿದೆ.

ಬೆಳೆಯುತ್ತಿವೆ ಚಿಟ್ಟೆಗಳನ್ನು ಆಕರ್ಷಿಸುವ ಸಸ್ಯಗಳು

ಉದ್ದೇಶಿತ ಚಿಟ್ಟೆ ಪಾರ್ಕ್‌ನಲ್ಲಿ ಈಗಾಗಲೇ ಸಸ್ಯಗಳನ್ನು ನೆಡಲಾಗಿದೆ. ಕೂಫಿಯಾ, ಪೆಂಟೋಸ್, ಹೈಬಿಸ್ಕಸ್, ಇಕ್ಸೋರ, ನಂದಿ ಬಟ್ಲು ಸೇರಿದಂತೆ ಅನೇಕ ಹೂವುಗಳನ್ನು ಬಿಡುವ ಗಿಡಗಳನ್ನು ನೆಡಲಾಗಿದೆ. ಈ ಸಸ್ಯಗಳು, ಇವುಗಳಲ್ಲಿ ಬಿಡುವ ಹೂವುಗಳು ಮತ್ತು ಅವುಗಳ ಮಕರಂದ ಚಿಟ್ಟೆಗಳಿಗೆ ಪಂಚ ಪ್ರಾಣ. ಇದೆ ಕಾರಣಕ್ಕೆ ಇಂತಹ ಸಸ್ಯಗಳನ್ನು ಬೆಳೆಸಲಾಗುತ್ತಿದೆ.

ಚಿಟ್ಟೆಗಳ ಕುರಿತು ಸರ್ವೆ

ಚಿಟ್ಟೆ ಪಾರ್ಕ್ ಆರಂಭಿಸುವ ಮೊದಲು ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಸಿಬ್ಬಂದಿ ಸರ್ವೆ ನಡೆಸಿದ್ದರು. ಸಫಾರಿ ಭಾಗದಲ್ಲಿ ಎಷ್ಟು ಬಗೆಯ ಚಿಟ್ಟೆಗಳಿವೆ, ಯಾವೆಲ್ಲ ಜಾತಿಯ ಚಿಟ್ಟೆಗಳಿವೆ ಎಂದು ಪರಿಶೀಲಿಸಿದ್ದರು. ಈ ಸಂದರ್ಭ ಸುಮಾರು 25 ವಿವಿಧ ಜಾತಿಯ ಚಿಟ್ಟೆಗಳು ಕಂಡು ಬಂದಿವೆ. ಅವುಗಳನ್ನು ಚಿಟ್ಟೆ ಪಾರ್ಕ್‌ನತ್ತ ಸೆಳೆಯುವ ಪ್ರಯತ್ನ ಆರಂಭಿಸಲಾಗಿದೆ.

ದುಂಬಿಗಳಿಗೂ ಇಲ್ಲಿದೆ ಎಂಟ್ರಿ

ಈ ಪಾರ್ಕ್‌ನಲ್ಲಿ ಚಿಟ್ಟೆಗಳಷ್ಟೆ ಅಲ್ಲ, ದುಂಬಿಗಳಿಗು ಅವಕಾಶವಿದೆ. ದುಂಬಿಗಳು ಕೂಡ ಈ ಪಾರ್ಕ್’ನಲ್ಲಿ ಮಕರಂದ ಹೀರುತ್ತ, ಸ್ವಚ್ಛಂದವಾಗಿ ಹಾರಾಡಬಹುದಾಗಿದೆ. ಮಕ್ಕಳು ಮತ್ತು ಹಿರಿಯರಿಗೆ ದುಂಬಿಗಳು ಮತ್ತು ಚಿಟ್ಟೆಗಳು ಒಟ್ಟಿಗೆ ಕಣ್ತುಂಬಿಕೊಳ್ಳಲು ಅವಕಾಶವಾಗಲಿದೆ. ಇನ್ನು, ಪ್ರವಾಸಿಗರಿಗೆ ಚಿಟ್ಟೆಗಳು ಮತ್ತು ದುಂಬಿಗಳ ಕುರಿತು ಮಾಹಿತಿ ನೀಡುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಇದಕ್ಕಾಗಿಯೇ ಫಲಕಗಳನ್ನು ಅಳವಡಿಸಲು ಯೋಜಿಸಲಾಗಿದೆ. ಈ ಫಲಕದಲ್ಲಿ ದುಂಬಿಗಳು ಮತ್ತು ಚಿಟ್ಟೆಗಳ ಕುರಿತು ಸಮಗ್ರ ಮಾಹಿತಿ ಇರಲಿದೆ. ಅವುಗಳ ಹುಟ್ಟು, ಜೀವನ ಕ್ರಮ, ಆಹಾರ, ಪ್ರಕೃತಿಗೆ ಅವುಗಳ ಕೊಡುಗೆ ಸೇರಿದಂತೆ ಸಂಪೂರ್ಣ ಮಾಹಿತಿ ಇರಲಿದೆ.

ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಇದು ವಿಭಿನ್ನ ಪ್ರಯೋಗವಾಗಿದೆ. ವಿವಿಧ ಪ್ರಾಣಿ, ಪಕ್ಷಿ, ಜಲಚರಗಳನ್ನು ಕಣ್ತುಂಬಿಕೊಳ್ಳುವ ಅವಕಾಶವಿದೆ. ಈಗ ಚಿಟ್ಟೆ ಪಾರ್ಕ್ ಆರಂಭವಾಗುತ್ತಿರುವುದು ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲಿದೆ.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button