Uncategorized

ಶಿಕ್ಷೆ ಅವಧಿ ಮುಗಿದಿದ್ದರೂ ಜೈಲಿನಲ್ಲೇ ಇರಿಸಲಾಗಿದ್ದ ಅಪರಾಧಿಗೆ 7.5 ಲಕ್ಷ ರೂ. ಪರಿಹಾರ ನೀಡುವಂತೆ ಛತ್ತೀಸ್‌ಗಢ ಸರ್ಕಾರಕ್ಕೆ ಸುಪ್ರೀಂ ಆದೇಶ

ದೆಹಲಿ: ಅತ್ಯಾಚಾರ ಆರೋಪಿಗೆ 7.5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಛತ್ತೀಸ್‌ಗಢ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಅತ್ಯಾಚಾರ ಆರೋಪಿಗೆ ವಿಧಿಸಿದ್ದ ಶಿಕ್ಷೆಯ ಅವಧಿ ಮುಗಿದಿದ್ದರೂ ಆತ ಹೆಚ್ಚು ದಿನಗಳ ಕಾಲ ಜೈಲಿನಲ್ಲೇ ಇರಿಸಲಾಗಿತ್ತು.
ಹೀಗಾಗಿ, ಸಂತ್ರಸ್ತನಿಗೆ ಪರಿಹಾರ ಹಣ ನೀಡುವಂತೆ ಸುಪ್ರೀಂ ತಿಳಿಸಿದೆ.

ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಸಿ ಟಿ ರವಿಕುಮಾರ್ ಅವರ ಪೀಠವು ಈ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ʻಅರ್ಜಿದಾರರು ಯುವಕರಾಗಿದ್ದು, ಇಂತಹ ಹೆಚ್ಚುವರಿ ಅಕ್ರಮ ಬಂಧನದ ಕಾರಣದಿಂದಾಗಿ ಮಾನಸಿಕ ಸಂಕಟ ಮತ್ತು ನೋವನ್ನು ಅನುಭವಿಸಿದ್ದಾರೆ. ಇದಕ್ಕೆ ಪರಿಹಾರವಾಗಿ 7.5 ಲಕ್ಷ ರೂ.ಗಳನ್ನು ರಾಜ್ಯ ಸರ್ಕಾರವು ನೀಡುವ ಆದೇಶವನ್ನು ಹೊರಡಿಸುವುದು ನ್ಯಾಯಸಮ್ಮತವಾಗಿದೆ ಎಂದು ನಾವು ಭಾವಿಸುತ್ತೇವೆ ಎಂದಿದ್ದರು.

ಘಟನೆಯ ವಿವರ…

ಅತ್ಯಾಚಾರ ಆರೋಪದ ಮೇಲೆ ವ್ಯಕ್ತಿಯೊಬ್ಬನಿಗೆ ಛತ್ತೀಸ್​ಗಢ ಹೈಕೋರ್ಟ್ 12 ವರ್ಷಗಳ ಕಾಲ ​ಜೈಲು ಶಿಕ್ಷೆ ವಿಧಿಸಿತ್ತು. ನಂತ್ರ, 2018ರಲ್ಲಿ ಈ ಅರೋಪಿಗೆ ಜೈಲು ಶಿಕ್ಷೆ ಪ್ರಮಾಣವನ್ನು 7 ವರ್ಷ ಕಠಿಣ ಜೈಲು ಶಿಕ್ಷೆಗೆ ಪರಿವರ್ತಿಸಿತ್ತು. ನಂತ್ರ ಶಿಕ್ಷೆ ವಿಧಿಸಿದ್ದ ಅವಧಿ ಮುಗಿದಿದ್ದರೂ, ನನ್ನನ್ನು ಬಿಡುಗಡೆಗೊಳಿಸಿಲ್ಲ ಎಂದು ವ್ಯಕ್ತಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದರು.

ಪ್ರಕರಣವನ್ನು ಪರಿಶೀಲಿಸುವಾಗ, ಈ ವ್ಯಕ್ತಿಯನ್ನು ಜೈಲು ಶಿಕ್ಷೆಯ ಅವಧಿಯನ್ನು ಮೀರಿ ಜೈಲಿನಲ್ಲಿ ಇರಿಸಲಾಗಿತ್ತು ಎಂದು ತಿಳಿದುಬಂದಿದೆ. ಒಟ್ಟು 10 ವರ್ಷ 3 ತಿಂಗಳು 16 ದಿನ ಜೈಲಿನಲ್ಲಿದ್ದರು ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ಕೋರ್ಟ್‌ ವಿಧಿಸಿದ ಅವಧಿಗಿಂತ ಆರೋಪಿ ಹೆಚ್ಚು ದಿನಗಳ ಕಾಲ ಜೈಲು ವಾಸ ಅನುಭವಿಸಿದ್ದಾನೆ ಎಂದು ತಿಳಿದ ಸುಪ್ರೀಂ ಗರಂ ಆಗಿದ್ದು, ಛತ್ತೀಸ್‌ಗಢದಲ್ಲಿನ ಜೈಲಾಧಿಕಾರಿಗಳಿಗೆ ಛೀಮಾರಿ ಹಾಕಿದ್ದು, ರಾಜ್ಯ ಸರ್ಕಾರವು ಸಂತ್ರಸ್ತನಿಗೆ ಪರಿಹಾರವಾಗಿ 7.5 ಲಕ್ಷ ರೂ. ಹಣ ನೀಡುವಂತೆ ಸೂಚಿಸಿದೆ.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button